ಕನಸಿನ ರಾಣಿ ಮಾಲಾಶ್ರೀ ಹಾಗೂ ಕೋಟಿ ನಿರ್ಮಾಪಕ ಎಂದೇ ಕರೆಸಿಕೊಂಡಿದ್ದ ನಿರ್ಮಾಪಕ ಕೋಟಿ ರಾಮು ಅವರ ಪುತ್ರಿ ಆರಾಧನಾ ರಾಮು ಈಗ ಚಿತ್ರರಂಗ ಪ್ರವೇಶಿಸಿದ್ದಾರೆ. ಮೊದಲ ಚಿತ್ರದಲ್ಲೇ ಅದ್ಧೂರಿ ಲಾಂಚ್ ಸಿಕ್ಕಿದೆ. ಒಂದು ಕಡೆ ರಾಕ್‌ಲೈನ್ ವೆಂಕಟೇಶ್ ಬ್ಯಾನರ್ ಮತ್ತೂಂದು ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇನ್ನೊಂದು ಕಡೆ “ರಾಬರ್ಟ್’ನಂತಹ ಹಿಟ್ ಸಿನಿಮಾ ಕೊಟ್ಟ ತರುಣ್ ಸುಧೀರ್… ಈ ಮೂವರ ಕಾಂಬಿನೇಶನ್‌ನಲ್ಲಿ ಬರುತ್ತಿರುವ “ಕಾಟೇರಾ’ ಸಿನಿಮಾ ಮೂಲಕ ಆರಾಧನಾ ಅದ್ಧೂರಿಯಾಗಿ ಲಾಂಚ್ ಆಗಿದ್ದಾರೆ. ಈ ಚಿತ್ರ ಡಿ.29ಕ್ಕೆ ತೆರೆಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಆರಾಧನಾ ತಮ್ಮ ಚೊಚ್ಚಲ ಚಿತ್ರದ ಅನುಭವಗಳನ್ನು ಹಂಚಿಕೊಂಡಿದ್ದಾರೆ…
ನಿಮ್ಮ ಮೊದಲ ಸಿನಿಮಾ ರಿಲೀಸ್‌ಗೆ ಬಂದಿದೆ. ಹೇಗನಿಸುತ್ತಿದೆ?
ಮಿಕ್ಸ್ಡ್ ಎಮೋಶನ್ಸ್ ಅಂತಾರಲ್ಲ, ಆ ತರಹದ ಭಾವದಲ್ಲಿ ನಾನಿದ್ದೇನೆ. ಒಂದು ಕಡೆ ಖುಷಿ. ಮೊದಲ ಬಾರಿಗೆ ನಾನು ಬಿಗ್‌ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ ಮತ್ತು ಎಲ್ಲರೂ ನನ್ನನ್ನು ನೋಡುತ್ತಾರೆ ಅನ್ನೋದು. ಇನ್ನೊಂದು ಕಡೆ ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋ ನರ್ವಸ್ ಕೂಡಾ ಇದೆ. ಒಂದೇ ಮಾತಲ್ಲಿ ಹೇಳಬೇಕಾದರೆ ನಾನು ತುಂಬಾ ಎಕ್ಸೆ„ಟ್ ಆಗಿರೋದಂತೂ ನಿಜ.
ದೊಡ್ಡ ಸ್ಟಾರ್, ದೊಡ್ಡ ಬ್ಯಾನರ್‌ನಲ್ಲಿ ಲಾಂಚ್ ಆಗುತ್ತಿದ್ದೀರಿ?
ಇದು ತುಂಬಾ ಅಪರೂಪ. ಮೂರು ದೊಡ್ಡ ಪಿಲ್ಲರ್‌ಗಳು ನನಗೆ ಸಿಕ್ಕಿವೆ. ಜೊತೆಗೆ ಒಳ್ಳೆಯ ಪಾತ್ರ. ಈ ತರಹದ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ಆ ವಿಚಾರದಲ್ಲಿ ನಾನು ತುಂಬಾ ಲಕ್ಕಿ.
ನಿಮ್ಮ ಪಾತ್ರದ ಬಗ್ಗೆ ಹೇಳಿ?
ನಾನಿಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಆದರೆ ಆ ಪಾತ್ರ ತುಂಬಾ ಎಜುಕೇಟೆಡ್ ಆಗಿರುತ್ತದೆ. ಜೊತೆಗೆ ಸವಾಲಿನ ಹಾಗೂ ಅಷ್ಟೇ ಪವರ್‌ಫುಲ್ ಪಾತ್ರ. ತುಂಬಾ ಬೋಲ್ಡ್ ಅಂಡ್ ಖಡಕ್ … ನಾನು ಈ ಪಾತ್ರವನ್ನು ಎಂಜಾಯ್ ಮಾಡಿದ್ದೀನಿ.
ರಾಧನಾ ಈಗ ಆರಾಧನಾ ಆಗಿದ್ದೀರಿ. ಯಾಕೆ?
ಸಿನಿಮಾ ಶುರುವಾದಾಗ ರಾಧಾನಾ ಅಂತ ಹೆಸರಿತ್ತು. ಆ ನಂತರ ಜಾತಕ ಪ್ರಕಾರ ನೋಡುವಾಗ “ಆ’ ಅಕ್ಷರ ನನಗೆ ಚೆನ್ನಾಗಿ ಕೂಡಿಬರುತ್ತದೆ ಎಂಬ ಕಾರಣಕ್ಕೆ “ಆರಾಧನಾ’ ಎಂದು ಬದಲಿಸಿದೆವು.
ದರ್ಶನ್ ನಿಮ್ಮ ನಟನೆಯನ್ನು ಹೊಗಳಿದ್ದಾರೆ?
ನನ್ನ ಬಗ್ಗೆ ಅವರು ಮಾತನಾಡಿದರೆ ಅದು ಅವರ ದೊಡ್ಡತನ. ನನ್ನಂತಹ ಹೊಸಬಳ ಪಾಲಿಗೆ ಅದು ಅದೃಷ್ಟ ಕೂಡಾ. ಸಿನಿಮಾದುದ್ದಕ್ಕೂ ನನಗೆ ಕಂಫರ್ಟ್ ಫೀಲ್ ಕೊಟ್ಟಿದ್ದಾರೆ.
ಮಗಳನ್ನು ತೆರೆಮೇಲೆ ನೋಡಲು ಅಮ್ಮನ ಎಕ್ಸೈಟ್‌ಮೆಂಟ್ ಎಷ್ಟಿದೆ?
ತುಂಬಾನೇ ಇದೆ. ಸಿನಿಮಾ ಶುರು ಆದಾಗಿಂದಲೂ ಅವರು ನನ್ನ ಶೂಟಿಂಗ್‌ನಲ್ಲಿ ಜೊತೆಗೇ ಇದ್ದಾರೆ. ಕ್ಯಾಮರಾ ಮುಂದೆ ಇದ್ದ ಅವರಿಗೆ ಈ ಬಾರಿ ಕ್ಯಾಮರಾ ಹಿಂದೆ ನಿಂತು ಮಗಳ ಪರ್‌ಫಾರ್ಮೆನ್ಸ್ ನೋಡುತ್ತಿದ್ದರು. ಅವರಿಗೆ ಲೈಫ್ ಕೊಟ್ಟ ಚಿತ್ರರಂಗಕ್ಕೆ ಈಗ ನಾನೂ ಬರುತ್ತಿದ್ದೇನೆ ಎಂಬ ಖುಷಿ ಅವರಿಗಿದೆ.
“ಕಾಟೇರಾ’ ಬಗ್ಗೆ ಹೇಳಿ?
ಇದೊಂದು ಪಕ್ಕಾ ಪ್ಯಾಕೇಜ್ ಸಿನಿಮಾ. ಇಲ್ಲಿ ಒಂದು ಗಟ್ಟಿಕಥೆ ಇದೆ, ಒಳ್ಳೆಯ ಉದ್ದೇಶವಿದೆ, ಮಾಸ್-ಕ್ಲಾಸ್ ಇಷ್ಟಪಡುವ ಹಲವು ಅಂಶಗಳು ಈ ಚಿತ್ರದಲ್ಲಿವೆ. ಚಿತ್ರಮಂದಿರದೊಳಗೆ ಬಂದ ಪ್ರೇಕ್ಷಕನಿಗೆ “ಕಾಟೇರಾ’ ಒಂದು ಹೊಸ ಅನುಭವ ನೀಡುವುದು ಗ್ಯಾರಂಟಿ.
ಚಿತ್ರರಂಗಕ್ಕೆ ಕಾಲಿಡುವ ಮೊದಲು ನಿಮ್ಮ ತಯಾರಿ ಹೇಗಿತ್ತು?
ನಟಿಯಾಗಬೇಕು ಎಂಬುದು ನನ್ನ ಕನಸಾಗಿತ್ತು. ಹಾಗಾಗಿ ನನ್ನ ವಿದ್ಯಾಭ್ಯಾಸ ಮುಗಿಸಿ, 12 ನೇ ತರಗತಿ ನಂತರ ಅಭಿನಯ ತರಬೇತಿಗೆ ಸೇರಿದೆ. ಸುಮಾರು ಎರಡೂವರೆ ವರ್ಷಗಳ ಕಾಲ ಮುಂಬೈನಲ್ಲಿ ಆ್ಯಕ್ಟಿಂಗ್ ಹಾಗೂ ನೃತ್ಯದ ಕುರಿತ ತರಬೇತಿ ಪಡೆದೆ. ಹೆಸರಾಂತ ಅಭಿನಯ ಶಾಲೆಗಳಾದ ಕಿಶೋರ್ ನಾಮಥ್ ಕಪೂರ್, ಅನುಪಮ್ ಖೇರ್ ರಂತಹ ದಿಗ್ಗಜರ ಬಳಿ ನಟನಾ ತರಬೇತಿ ಪಡೆದೆ. ನಟನೆಯ ಜೊತೆ ಜೊತೆಗೆ ನೃತ್ಯ ತರಬೇತಿಯನ್ನು ಪಡೆಯುತ್ತಿದ್ದ ನಾನು ಸಾಕಷ್ಟು ಡಾನ್ಸ್ ಶೈಲಿಗಳನ್ನು ಕಲಿತೆ. ಕಥಕ್, ದಕ್ಷಿಣ ಭಾರತದ ಜಾನಪದ ಶೈಲಿ ನೃತ್ಯಗಳು, ಬಾಲಿವುಡ್ ಡಾನ್ಸ್ ಹಾಗೂ ವೆಸ್ಟ್‌ರ್ನ್ ಡಾನ್ಸ್ , ಹಿಪ್ ಹಾಪ್ ಎಲ್ಲವನ್ನೂ ಕಲಿತಿದ್ದೆ. ಮುಂಬೈನಿಂದ ಬಂದ ನಂತರವೂ ಬೆಂಗಳೂರಿನಲ್ಲಿ ಸಹ ಡಾನ್ಸ್ ಹಾಗೂ ಅಭಿನಯದ ವರ್ಕ್‌ಶಾಪ್‌ಗ್ಳಲ್ಲಿ ಭಾಗವಹಿಸಿದ್ದೆ. ಇಂದಿಗೂ ಕೂಡ ನಾನು ಇವೆಲ್ಲದರ ಅಭ್ಯಾಸದಲ್ಲಿ ಇದ್ದೇನೆ.
ರವಿಪ್ರಕಾಶ್ ರೈ