Advertisement

ತೋಟಕ್ಕೆ ಮದ್ದು ಬಿಟ್ಟರೂ ಉದುರುತ್ತಿವೆ ಎಳೆ ಅಡಿಕೆ!

01:45 AM Jul 27, 2018 | Karthik A |

ವಿಶೇಷ ವರದಿ – ಸುಳ್ಯ: ಮಳೆ ಅಬ್ಬರದ ಮಧ್ಯೆ ಅಡಿಕೆ ತೋಟಕ್ಕೆ ಮದ್ದು ಔಷಧ ಸಿಂಪಡಣೆ ತ್ರಾಸದ ಸಂಗತಿ. ಹಾಗಂತ ಮದ್ದು ಬಿಟ್ಟು ನಿರಾಳ ಆದೆವು ಅಂದರೆ, ಪ್ರಯೋಜನ ಇಲ್ಲ. ಕಾರಣ ಉದುರುತ್ತಿರುವ ಎಳೆ ಅಡಿಕೆ ಸಂಖ್ಯೆ ದಿನೇ-ದಿನೇ ವೃದ್ಧಿಯಾಗುತ್ತಿದೆ. ಸುಳ್ಯ, ಪುತ್ತೂರು, ವಿಟ್ಲ, ಬೆಳ್ತಂಗಡಿಯ ಕೆಲವು ತೋಟಗಳಲ್ಲಿ ಎಳೆ ಅಡಕೆ ಕಾಯಿ ಉದುರುವ ರೋಗ ಕಾಣಿಸಿ ಕೊಂಡಿದೆ. ಕೆಲವರು ಇದು ಕೊಳೆ ರೋಗ ಅನ್ನುತ್ತಾರೆ. ಉಳಿದವರು ಕೀಟ ಸಂಬಂಧಿ ರೋಗ ಆಗಿರುವ ಶಂಕೆ ವ್ಯಕ್ತಪಡಿಸುತ್ತಾರೆ. ಅದೇನಿದ್ದರೂ, ಔಷಧಕ್ಕೆ ಬಗ್ಗದ ರೋಗದಿಂದ ಕೃಷಿಕರು ಕಂಗಲಾಗಿದ್ದಾರೆ. ಕೊಳೆರೋಗದಲ್ಲಿ ಅಡಿಕೆ ಕೊಳೆತು ಉದುರಿದರೆ, ಇಲ್ಲಿ ಕೊಳೆಯದೆ ಬೀಳುತ್ತಿದೆ. ವಿಜ್ಞಾನಿಗಳು ನಾನಾ ಕಾರಣ ಹೇಳಿದರೂ, ರೋಗ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಅನ್ನುತ್ತಾರೆ ಅಡಿಕೆ ಕೃಷಿಕ ಪೂವಪ್ಪ ಅವರು.

Advertisement

ಏನು ರೋಗ..?
ಇದು ಕೀಟಬಾಧೆಯೋ ಅಥವಾ ಕೊಳೆ ರೋಗವೋ ಎಂಬ ಬಗ್ಗೆ ಬೆಳೆಗಾರರಿಗೆ ಜಿಜ್ಞಾಸೆ ಇದೆ. ಕೀಟ ಬಾಧಿಸಿ ರುವ ತೋಟಗಳಲ್ಲಿ ಉದುರಿರುವ ಎಳೆ ಅಡಿಕೆಗಳಲ್ಲಿ ಕೀಟಗಳು ಪತ್ತೆಯಾಗುತ್ತಿವೆ ಎನ್ನುತ್ತಾರೆ ಕೆಲ ಕೃಷಿಕರು. ವಿಟ್ಲ CPCRIನಲ್ಲಿ ರೋಗದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ತೋಟಗಾರಿಕೆ ಇಲಾಖೆ ನಿರ್ದಿಷ್ಟ ಹೆಸರಿನ ಕೀಟನಾಶಕ ಸಿಂಪಡಿಸಿದರೆ ಅದರಿಂದ ಪರಿಹಾರ ಸಾಧ್ಯ ಎಂದಿದ್ದರೂ, ಅದರಿಂದ ಪ್ರಯೋಜನ ಆಗಿಲ್ಲ.

ಮದ್ದು ಸಿಂಪಡಣೆ ಸವಾಲು
ಅನಿರೀಕ್ಷಿತ ಮಳೆಯಿಂದ ಶೇ. 70ಕ್ಕೂ ಅಧಿಕ ಅಡಿಕೆ ಬೆಳೆಗಾರರು ಮದ್ದು ಸಿಂಪಡಣೆ ಮಾಡಿಲ್ಲ. ಬಹುತೇಕ ಕೃಷಿಕರು ಬೋರ್ಡೋ ದ್ರಾವಣ ಬಳಸುವುದು ಸರ್ವೆ ಸಾಮಾನ್ಯ. ಆದರೆ ಮೊದಲ ಹಂತದ ಮದ್ದು ಸಿಂಪಡಣೆಗೆ ಮಳೆ ವಿರಾಮ ಕೊಟ್ಟಿಲ್ಲ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಲ ತೋಟಗಳಲ್ಲಿ ಮೂರನೇ ಬಾರಿ ಮದ್ದು ಸಿಂಪಡಿಸಲಾಗಿತ್ತು. ಹಾಗಾಗಿ ಮದ್ದು ಬಿಡದೆ ಇನ್ನಷ್ಟು ರೋಗ ಬಾಧೆಯ ಆತಂಕವೂ ಮೂಡಿದೆ.

ಮದ್ದು ಸಿಂಪಡಣೆಗೆ ಸಿದ್ಧತೆ ನಡೆಸಿದವರಿಗೆ ಜಡಿಮಳೆ ಅಡ್ಡಿಯಾಗಿತ್ತು. ಅಪರೂಪಕ್ಕೆ ಬಿಸಿಲು ಕಾಣಿಸಿಕೊಂಡಾಗ ಸಣ್ಣಪುಟ್ಟ ತೋಟಗಳಿಗೆ ಔಷಧ ಸಿಂಪಡಿಸಿದ್ದೂ ಇದೆ. ಈ ವೇಳೆ ಕಾರ್ಮಿಕರು ಸಿಗುತ್ತಿಲ್ಲ. ಅಷ್ಟೊಂದು ಬೇಡಿಕೆ ಇದೆ. ಬೇಸಗೆಯಲ್ಲಿ ನೀರಿಲ್ಲದೆ ಬರಡಾಗಿದ್ದ ಅಡಿಕೆ ತೋಟಗಳಿಗೆ ಈ ಬಾಧೆ ತುಸು ಕಡಿಮೆ. ಬೇಸಗೆಯಲ್ಲಿ ಯಥೇತ್ಛವಾಗಿ ನೀರು ಹಾಯಿಸಿದ ತೋಟಗಳಲ್ಲಿ, ನದಿತಟದ ಭಾಗಗಳಲ್ಲಿ ರೋಗ ಹೆಚ್ಚು ಕಾಣುತ್ತಿದೆ.

ರೋಗಗಳ ಸಾಲು
ತಾಲೂಕಿನಲ್ಲಿ  ಹಳದಿ ರೋಗ, ಬೇರು ಹುಳ ರೋಗ ಸಹಿತ ವಿವಿಧ ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ತತ್ತರಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಕಡಿಮೆಯಾಗುತ್ತಿಲ್ಲ. ಈಗ ಕೀಟಬಾಧೆ, ಅಬ್ಬರದ ಮಳೆಯಿಂದ ಕೊಳೆರೋಗ ಭೀತಿ. ಬೆಳೆಗಾರರು ನೀಡುವ ಮಾಹಿತಿ ಪ್ರಕಾರ ಈ ಬಾರಿ ನಷ್ಟದ ಪ್ರಮಾಣ ದುಪ್ಪಟ್ಟಾಗಲಿದೆ.

Advertisement

ರೋಗ ಇದೆ
ಮದ್ದು ಸಿಂಪಡಣೆ ಕಷ್ಟ. ನಿರಂತರ ಮಳೆಯ ಪರಿಣಾಮ ಮದ್ದು ಸಿಂಪಡಣೆ ಸಾಧ್ಯವಾಗುತ್ತಿಲ್ಲ. 2013ರಲ್ಲೂ ಇದೇ ರೀತಿಯ ಮಳೆಯಾಗಿ ಕೊಳೆರೋಗ ಬಾಧಿಸಿತ್ತು. ಹಲವು ತೋಟಗಳಲ್ಲಿ ಅಡಿಕೆ ಉದುರುತ್ತಿರುವ ಮಾಹಿತಿ ಇದೆ. 
– ಎಂ.ಡಿ.ವಿಜಯಕುಮಾರ್‌, ಅಡಿಕೆ ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next