ನಂಜನಗೂಡು: ಇಲಾಖೆಯ ದಾಖಲೆಯಲ್ಲಿ ಪೂರ್ಣಗೊಂಡು ಐದು ವರ್ಷವಾದರೂ ಇಂದಿಗೂ ಅಪೂರ್ಣವಾಗಿಯೇ ಉಳಿದ ಕಾಮಗಾರಿ ಎಂಬ ಹೆಗ್ಗಳಿಕೆ ತಾಲೂಕಿನ ಏಕೈಕ ಶಿಕ್ಷಕರ ವಸತಿ ಗೃಹಕ್ಕೆ ಸಲ್ಲುತ್ತದೆ. 2011ರಲ್ಲಿ ತಾಲೂಕಿನ ಹುರಾ ಗ್ರಾಮದಲ್ಲಿ ಶಿಕ್ಷಕರ ವಸತಿ ಗೃಹದ ಸಮುಚ್ಚಯದ ಕಾಮಗಾರಿ ಪ್ರಾರಂಭವಾಗಿ 2012ರಲ್ಲಿ ಪೂರ್ಣಗೊಂಡಿದೆ ಎಂದು ಇಲಾಖೆಯ ದಾಖಲಾತಿಗಳಲ್ಲಿ ಹೇಳಲಾಗಿದೆ.
ಆದರೆ ಇಲ್ಲಿ ಅಂದಿನಿಂದಲೂ ಯಾವ ಶಿಕ್ಷಕನೂ ವಾಸವಾಗಿಲ್ಲ. 44.80 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡ ವಸತಿ ಗೃಹಗಳು ಇಂದಿಗೂ ಖಾಲಿಯಾಗಿಯೇ ಉಳಿದಿವೆ. ಯಾರಿಗೂ ವಸತಿ ಗೃಹಗಳನ್ನು ಮಂಜೂರು ಮಾಡಿಯೇ ಇಲ್ಲ. ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರ 8 ಗೃಹಗಳ ವಸತಿ ಸಮುಚ್ಚಯದ ಕಾಮಗಾರಿ 2012ರಲ್ಲೇ ಪೂರ್ಣಗೊಂಡಿದೆ ಶಿಕ್ಷಣ ಇಲಾಖೆಗೆ ಹಸ್ತಾಂತರವೂ ಆಗಿ ಹೋಗಿದೆ. ಇವಲ್ಲವೂ ದಾಖಲೆ ಆದರೆ ಕಾಮಗಾರಿ ಮಾತ್ರ ಇಂದಿಗೂ ಅಪೂರ್ಣ.
ಕಟ್ಟಡದ ಚಾವಣಿ ಮುಚ್ಚಿಲ್ಲ. ಕಿಟಕಿಗಳಿಗೆ ಬಾಗಿಲು ಜೋಡಿಸಿಯೇ ಇಲ್ಲ. ಅಸ್ತವ್ಯಸ್ತವಾದ ಅಡುಗೆ ಮನೆ ಕಾಮಗಾರಿ, ಇಷ್ಟೇ ಅಲ್ಲ. ಮನೆಗಳ ನೆಲ ಹಾಸಿನ ಕಾಮಗಾರಿಯೇ ಮುಗಿದಿಲ್ಲ. ಐದು ವರ್ಷಗಳ ಹಿಂದೆ 2012ರಲ್ಲಿ ನೆಲ ಹಾಸು ಹಾಕಲು ಸಿದ್ಧಪಡಿಸಿದ ಕಾಮಗಾರಿ ಪೂರ್ಣವಾಗದೇ ಟೈಲ್ಸ್ ಕಾಣದೇ ಇಂದಿಗೂ ಹಾಗೇಯೇ ಉಳಿದಿದೆ. ಅಡುಗೆ ಮನೆ ಈಗಾಗಲೆ ಸೋರಲಾರಂಭಿಸಿದೆ. ಈ ಅಪೂರ್ಣ ಕಾಮಗಾರಿಯ ಬಿಲ್ ಮಾತ್ರ ಪೂರ್ಣವಾಗಿ ಸಂದಾಯವಾಗಿದೆ.
ಇದನ್ನು ನಿರ್ಮಿಸಿದವರು ಬೆಂಗಳೂರಿನ ಸರ್ಕಾರದ ಆಧೀನದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ. 2011ರಲ್ಲಿ 44.80 ಲಕ್ಷ ರೂ.ಗೆ ಕಾಮಗಾರಿ ಪಡೆದ ನಿಗಮವು ಕೆಲಸ ಪೂರ್ಣವಾಗಿದೆ ಎಂದು ದಾಖಲಿಸಿ 2012ರಲ್ಲೆ ಕಟ್ಟಡದ ಹಸ್ತಾತರ ಮಾಡಿದ್ದಕ್ಕೂ ದಾಖಲೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಈ ಕಾಮಗಾರಿಯ ಪೂರ್ಣ ಮೊತ್ತ ಸಂದಾಯವಾಗಿದೆ. ಅರೆ ಬರೆ ಕಾಮಗಾರಿಯನ್ನು ಪೂರ್ಣವಾಗಿದೆ ಎಂದು ವಹಿಸಿಕೊಂಡ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾತ್ರ ಇಷ್ಟು ದಿನಗಳಾದರೂ ಈ ಕುರಿತು ಚಕಾರವೆತ್ತಿಲ್ಲ. ಇದಕ್ಕೆ ಕಾರಣವೇನೆಂದು ಮಾತ್ರ ತಿಳಿಯುತ್ತಿಲ್ಲ.
ಕಾಮಗಾರಿಯನ್ನು ಈಗ ಯಾರು ಮುಗಿಸಬೇಕು? ಅರೆ ಬರೆ ಕಾಮಗಾರಿ ಮಾಡಿದ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮವೂ? ಅಥವಾ ಅಪೂರ್ಣ ಕಾಮಗಾರಿ ಪೂರ್ಣವಾಗಿದೆ ಎಂದು ರುಜು ಮಾಡಿದ ಇಲಾಖೆಯ ಅಧಿಕಾರಿಗಳ್ಳೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ನನ್ನ ಬಳಿ ಮಾಹಿತಿ ಇಲ್ಲ: ಶಿಕ್ಷಣಾಧಿಕಾರಿ
ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಾತ್ರ ಇಂದಿಗೂ ಕಟ್ಟಡದ ಕುರಿತು ಮಾಹಿತಿಯೇ ಇಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣರನ್ನು ಸಂಪರ್ಕಿಸಿದಾಗ ಮಾಹಿತಿ ಕೊಡಿಸುತ್ತೇನೆ ಎಂದವರು ನಂತರ ಸಂಬಂಧಿಸಿದ ಗುಮಾಸ್ತರು ರಜೆಯಲ್ಲಿದ್ದಾರೆ ಎಂದರು. ನಮಗೆ ಕಟ್ಟಡ ಹಸ್ತಾಂತರವೇ ಆಗಿಲ್ಲ. ತಾನು ಇತ್ತೀಚೆಗೆ ಬಂದವನು. ನನ್ನಲ್ಲಿ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಕಟ್ಟಡದ ಕಾಮಗಾರಿ ಮಾತ್ರ ಇಂದಿಗೂ ಪೂರ್ಣವಾಗಿಲ್ಲ.
ಹಾಗಾಗಿ ನಾವು ವಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ನೆಲಹಾಸಿನ ಟೈಲ್ಸ್ ಕಳ್ಳತನವಾಗಿದೆ ಎಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕ ಗೋಪಾಲಕೃಷ್ಣ, ಕಟ್ಟಡದ ನೆಲ ಹಾಸಿಗೆ ಅಳವಡಿಸಲಾಗಿದ್ದ ಟೈಲ್ಸ್‌ಗಳನ್ನು ಯಾರೋ ಕಿತ್ತುಕೊಂಡು ಹೋಗಿದ್ದಾರೆ ಎಂದರು. ಹಾಗಾದರೆ ಪೊಲೀಸರಿಗೆ ದೂರು ನೀಡಿಲ್ಲವೆ ಎಂದು ಪ್ರಶ್ನಿಸಿದಾಗ ಅಂದು ತಾನಿರಲಿಲ್ಲ ಎಂದು ಹೇಳಿದರು.
* ಶ್ರೀಧರ್ ಆರ್.ಭಟ್