ಬೆಂಗಳೂರು: ತೀವ್ರ ಬರದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವಾಗುವ ಸಲುವಾಗಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಏಪ್ರಿಲ್‌ನಿಂದ ಪ್ರತಿ ಲೀಟರ್ ಹಾಲಿನ ದರ 33 ರೂ.ನಿಂದ 35 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.
ಮಡಿಕೇರಿಯಲ್ಲಿ ಕಳೆದ ವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ಪಶುಸಂಗೋಪನಾ ಸಚಿವ ಎ.ಮಂಜು ಅವರು ಹಾಲಿನ ದರ ಏರಿಕೆ ಚಿಂತನೆ ಬಗ್ಗೆ ಸುಳಿವು ನೀಡಿದ್ದರು. ಇದನ್ನು ಪುಷ್ಟೀಕರಿಸುವಂತೆ ಬರದ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಖಾತರಿಪಡಿಸಿದ್ದಾರೆ.
ಆದರೆ, ಕೆಎಂಎಫ್ ಅಧ್ಯಕ್ಷ ನಾಗರಾಜ್, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ, ಸಚಿವರು ಹೇಳಿಕೆ ನೀಡಿದ್ದು, ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಒಂದೊಮ್ಮೆ ಏಪ್ರಿಲ್‌ನಲ್ಲಿ ಹಾಲಿನ ದರ ಏರಿಕೆಯಾದರೆ ಹೋಟೆಲ್ ಉದ್ಯಮದ ಮೇಲೆಯೂ ಪರಿಣಾಮ ಬೀರಲಿದ್ದು, ತಿಂಡಿ, ತಿನಿಸು, ಉಪಾಹಾರಗಳ ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆಯಿದೆ.
ಸದ್ಯ ಪ್ರತಿ ಲೀಟರ್ ಹಾಲಿನ ದರ 33 ರೂ. ಇದ್ದು, ಅದನ್ನು 35 ರೂ.ಗೆ ಏರಿಕೆ ಮಾಡಲು ಚರ್ಚೆ ನಡೆದಿದೆ. ಹಾಲಿನ ಬೆಲೆ ಏರಿಕೆಯಾದರೂ ಮಾರಾಟದ ಮೇಲೆ ಹೆಚ್ಚಿನ ಪರಿಣಾಮ ಬೀರದು. ಏಕೆಂದರೆ ನೆರೆಯ ತಮಿಳುನಾಡು, ಆಂಧ್ರಪ್ರದೇಶದ ಡೇರಿಗಳು ಪ್ರತಿ ಲೀಟರ್ ಹಾಲನ್ನು 40 ರೂ.ಗೆ ಮಾರಾಟ ಮಾಡುತ್ತಿವೆ. ಹಾಗಾಗಿ ನಂದಿನಿ ಹಾಲಿನ ದರವೇ ಕಡಿಮೆಯಿರಲಿದೆ. 2 ರೂ. ದರ ಹೆಚ್ಚಳವಾದರೆ ಅದರಲ್ಲಿ 1.50 ರೂ.ನಿಂದ 1.60 ರೂ. ಹಣವನ್ನು ರೈತರಿಗೆ ಸಿಗಲಿದ್ದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವಾಗುವ ಸಾಧ್ಯತೆ ಇದೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.