ಬೆಂಗಳೂರು: “ನಮ್ಮ ಮೆಟ್ರೊ’ ಒಂದನೇ ಹಂತದ ಯೋಜನೆ ಫೆಬ್ರವರಿ ವೇಳೆಗೆ ಪೂರ್ಣಗೊಳ್ಳಲಿದ್ದು, ಮೆಜೆಸ್ಟಿಕ್- ಸಂಪಿಗೆ ರಸ್ತೆ ನಿಲ್ದಾಣ ಹಾಗೂ ಮೆಜೆಸ್ಟಿಕ್- ಕೋಣನಕುಂಟೆ ಕ್ರಾಸ್ ಮಾರ್ಗಗಳು ಏಪ್ರಿಲ್ ತಿಂಗಳಿಂದಲೇ ಸಾರ್ವಜನಿಕರ ಸೇವೆಗೆ ಮುಕ್ತಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಸ್ಪಷ್ಟಪಡಿಸಿದ್ದಾರೆ.
ನಮ್ಮ ಮೆಟ್ರೋ ಮೊದಲ ಹಂತದ “ಹಸಿರು ಮಾರ್ಗದಲ್ಲಿ’ ಕೆ.ಆರ್. ಮಾರುಕಟ್ಟೆಯಿಂದ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗದಲ್ಲಿ ಚಿಕ್ಕಪೇಟೆ ನಿಲ್ದಾಣ ನಿರ್ಮಾಣ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ಏಪ್ರಿಲ್ ವೇಳೆಗೆ ಸಂಪೂರ್ಣ ಮೊದಲ ಹಂತವು ಸಾರ್ವಜನಿಕರ ಸೇವೆಗೆ ಮುಕ್ತಗೊಳ್ಳುವುದು ಅನುಮಾನ ಎಂಬ ಮಾತು ಕೇಳಿ ಬರುತ್ತಿದ್ದು ಅದು ಸುಳ್ಳು ಎಂದು ಸ್ಪಷ್ಟಪಡಿಸಿದರು.
ಈ ಸುರಂಗ ಮಾರ್ಗದಲ್ಲಿ ಸಿವಿಲ್ ಕಾಮಗಾರಿ ನಡೆಯುತ್ತಿದೆ. ಚಿಕ್ಕಪೇಟೆ ಹೊರತುಪಡಿಸಿ ಉಳಿದ ಸುರಂಗ ಮಾರ್ಗ ನಿಲ್ದಾಣಗಳ ದ್ವಾರವನ್ನು ಈಗಾಗಲೇ ಮುಚ್ಚಲಾಗಿದೆ. ಸರಕಾರ ನೀಡಿದ ಗಡುವಿನಂತೆ ಏಪ್ರಿಲ್‌ನಲ್ಲಿ ವಾಣಿಜ್ಯ ಸಂಚಾರ ಆರಂಭವಾಗುವುದು ಖಚಿತ. ಫೆಬ್ರವರಿ 10ರ ವೇಳೆಗೆ ಪ್ರಾಯೋಗಿಕ ಸಂಚಾರ ನಡೆಯಲಿದೆ ಎಂದರು.
ಬಿಎಂಆರ್‌ಡಿಎ ಕಚೇರಿಯಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಇಂಟರ್‌ಚೇಂಜ್ ನಿಲ್ದಾಣದ ಬಗ್ಗೆ ಮಾಡೆಲ್ ಪ್ರದರ್ಶಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಪೇಟೆ ಸುರಂಗ ಮಾರ್ಗದ ದ್ವಾರದ ಬಳಿ ಕೆಲಸ ನಡೆಯುತ್ತಿದೆ. ಎರಡೂ ಹಳಿಗಳನ್ನು ಜೋಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಈಗ ಬೃಹತ್ ಪ್ರಮಾಣದ ಕೇಬಲ್‌ಗಳನ್ನು ಜೋಡಿಸಲಾಗುತ್ತಿದೆ.ನಿತ್ಯ 12 ಟನ್‌ನಷ್ಟು ಕೇಬಲ್ ಈ ಸುರಂಗ ಮಾರ್ಗದ ಮೂಲಕ ಸಾಗಿಸಲಾಗುತ್ತಿದೆ.
ಇದಕ್ಕಾಗಿಯೇ ಚಿಕ್ಕಪೇಟೆ ನಿಲ್ದಾಣದ ಬಳಿ ಸುರಂಗ ಮಾರ್ಗ ತೆರೆದಿಡಲಾಗಿದೆ. ಈ ಸಿವಿಲ್ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಪೂರ್ಣ ಬಂದ್ ಮಾಡಲಾಗುವುದು. ಬಳಿಕ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ ಎಂದು ಹೇಳಿದರು. ಸದ್ಯಕ್ಕೆ ನ್ಯಾಷನಲ್ ಕಾಲೇಜು ನಿಲ್ದಾಣದಿಂದ ಕೋಣನಕುಂಟೆ ಕ್ರಾಸ್‌ವರೆಗೆ ಪರೀಕ್ಷಾರ್ಥ ಸಂಚಾರ ನಡೆಯುತ್ತಿದ್ದು, ರೈಲ್ವೆ ಇಲಾಖೆಯಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ ಎಂದರು.
ಫೆ.10ಕ್ಕೆ ಪ್ರಾಯೋಗಿಕ ಚಾಲನೆ: ಏಪ್ರಿಲ್‌ನಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಈ ಮಾರ್ಗದಲ್ಲಿ ಫೆ.10ಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಳ್ಳಲಿದ್ದು ಪ್ರಾಯೋಗಿಕ ಚಾಲನೆಗೆ ಸಜ್ಜುಗೊಳ್ಳಲಿವೆ. ಇದೇ ಸಮಯದಲ್ಲಿ ಮೆಜೆಸ್ಟಿಕ್-ಸಂಪಿಗೆ ರಸ್ತೆ ನಿಲ್ದಾಣದ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ ಎಂದು ಖರೋಲ ಮಾಹಿತಿ ನೀಡಿದರು.
ವಿಮಾನ ನಿಲ್ದಾಣಕ್ಕೆ ಮೆಟ್ರೊ: ಕೇಂದ್ರದೊಂದಿಗೆ ಚರ್ಚೆ
ಮೆಟ್ರೋ ರೈಲು ವ್ಯವಸ್ಥೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಕಲ್ಪಿಸಲು ಈಗಾಗಲೇ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದ್ದು, ಈ ಬಗ್ಗೆ ವಿಮಾನಯಾನ ಸಚಿವರೊಂದಿಗೆ ಸದ್ಯದಲ್ಲೇ ಮಾತುಕತೆ ನಡೆಯಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
“ನಗರಕ್ಕೆ ಮೆಮು ರೈಲು ಸಾರಿಗೆ ನೀಡುವ ಬಗ್ಗೆ ಚರ್ಚೆಯಾಗುತ್ತಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ರೈಲು ಸಾರಿಗೆ ಸಹಕಾರಿಯಾಗಲಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಾರಿಗೆ ಸೇವೆ ನೀಡಲು ವಿಮಾನಯಾನ ಸಚಿವರ ಜತೆ ಚರ್ಚಿಸಲಾಗಿದ್ದು, ಮುಂದಿನ ವಾರವೂ ಈ ಬಗ್ಗೆ ಅಂತಿಮ ಮಾತುಕತೆ ನಡೆಯಲಿದೆ ಎಂದರು.