“ಜಾಗ್ವಾರ್’ ನಂತರ ನಿಖೀಲ್ ಕುಮಾರ್ ಅವರ ಎರಡನೆಯ ಚಿತ್ರ ಯಾವುದಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇತ್ತು. ತೆಲುಗಿನ ಸುರೇಂದರ್ ರೆಡ್ಡಿ ಅವರು ನಿಖೀಲ್ ಅಭಿನಯದ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಒಂದು ಕಡೆಯಾದರೆ, ಈ ಬಾರಿ ಕನ್ನಡಿಗರೇ ಯಾರಾದರೂ ನಿರ್ದೇಶಿಸುತ್ತಾರೆ ಎಂಬ ಸುದ್ದಿಯೂ ಇತ್ತು.
“ಬಹದ್ದೂರ್’ ಚೇತನ್, “ಹೆಬ್ಬುಲಿ’ ಖ್ಯಾತಿಯ ಕೃಷ್ಣ ಅಥವಾ ನೃತ್ಯ ನಿರ್ದೇಶಕ ಎ. ಹರ್ಷ ಹೀಗೆ ಮೂವರಲ್ಲೊಬ್ಬರು ನಿಖೀಲ್ ಅಭಿನಯದ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂದು ಹೇಳಲಾಗಿತ್ತು. ಈಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದು, ನಿಖೀಲ್ ಅಭಿನಯದ ಎರಡನೆಯ ಚಿತ್ರವನ್ನು ಚೇತನ್ ನಿರ್ದೇಶಿಸುವುದು ಪಕ್ಕಾ ಆಗಿದೆ.
ಅಂದಹಾಗೆ, ಈ ಚಿತ್ರದ ಸ್ಕ್ರಿಪ್ಟ್ ಪೂಜೆಯು ಏಪ್ರಿಲ್ ಎರಡಕ್ಕೆ ನಡೆಯಲಿದೆಯಂತೆ. ಇನ್ನು ಈ ಚಿತ್ರದ ಚಿತ್ರೀಕರಣ ಮೇ 15ರಿಂದ ಪ್ರಾರಂಭವಾಗಲಿದೆಯಂತೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಏಪ್ರಿಲ್ ಎರಡನೆಯ ವಾರದ ಹೊತ್ತಿಗೆ ಟೈಟಲ್ ಫಿಕ್ಸ್ ಆಗಲಿದೆ.
ಈ ಚಿತ್ರವನ್ನೂ ಮಾಜಿ ಮುಖ್ಯಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಮಿಸಲಿದ್ದು, ಇದು ಚೆನ್ನಾಂಬಿಕಾ ಪಿಕ್ಚರ್ನ ಏಳನೇ ಚಿತ್ರವಾಗಲಿದೆ. ಈ ಚಿತ್ರ ಬಜೆಟ್ ವಿಷಯದಲ್ಲಿ “ಜಾಗ್ವಾರ್’ಗಿಂಥ ಒಂದು ಕೈ ಮೇಲಿರುತ್ತದೆ ಎನ್ನುವ ಚಿತ್ರದ ಕಾರ್ಯಕಾರಿ ನಿರ್ಮಾಪಕ ಸುನೀಲ್ ಗೌಡ, ಈ ಚಿತ್ರದಲ್ಲಿ ಕನ್ನಡಿಗರೇ ದೊಡ್ಡ ಸಂಖ್ಯೆಯಲ್ಲಿ ಇರುತ್ತಾರೆ ಎಂದು ಹೇಳಲು ಮರೆಯುವುದಿಲ್ಲ. ಅದಕ್ಕೆ ಸರಿಯಾಗಿ ಶ್ರೀಷ ಕೂದುವಳ್ಳಿ ಅವರನ್ನು ಛಾಯಾಗ್ರಾಹಕರನ್ನಾಗಿ ಆಯ್ಕೆ ಮಾಡಲಾಗಿದೆ.
ಇನ್ನು ಸಂಗೀತ ನಿರ್ದೇಶನದ ಜವಾಬ್ದಾರಿ ವಿ. ಹರಿಕೃಷ್ಣ ಹೆಗಲಿಗೆ ಬೀಳಲಿದೆಯೋ ಅಥವಾ ಅರ್ಜುನ್ ಜನ್ಯ ಹೆಗಲಿಗೆ ಬೀಳಲಿದೆಯೋ ಇನ್ನೂ ಪಕ್ಕಾ ಆಗಿಲ್ಲ. ದೀಪು ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದ ಹೈಲೈಟ್ ಎಂದರೆ ಮೊದಲ 10 ನಿಮಿಷಗಳ ಭರ್ಜರಿ ಇಂಟ್ರೋ ಫೈಟ್. ನಿಖೀಲ್ ಅಮೇರಿಕಾಗೆ ಹೋಗಿ ತರಬೇತಿ ಪಡೆದು ಬಂದಿದ್ದು, ಅದೆಲ್ಲಾ ಈ ಚಿತ್ರದಲ್ಲಿ ಕಾಣುಬಹುದಾಗಿದೆ ಎನ್ನುವುದು ಈ ಚಿತ್ರದ ವಿಶೇಷ.