ಚೆನ್ನೈ: ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಸಹಿತ ಆರು ಭಾರತೀಯ ಚೆಸ್ ಆಟಗಾರರು ಎ.11ರಂದು ಅಭಿಮಾನಿಗಳ ಜತೆ ಆನ್‌ಲೈನ್‌ನಲ್ಲಿ ಚೆಸ್ ಆಡಲಿದ್ದಾರೆ.
ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಕೇಂದ್ರ ಸರಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಪ್ರಧಾನಿ ಕೋವಿಡ್ 19 ಪರಿಹಾರ ನಿಧಿಗೆ ಹಣ ಸಂಗ್ರಹಿಸುವುದು ಇದರ ಉದ್ದೇಶವಾಗಿದೆ. ಜಾಗತಿಕ ಪ್ರಯಾಣ ನಿರ್ಬಂಧದಿಂದಾಗಿ ಆನಂದ್ ಸದ್ಯ ಜರ್ಮನಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರು ಅಲ್ಲಿಂದಲೇ ಆನ್‌ಲೈನ್‌ನಲ್ಲಿ ಚೆಸ್ ಆಡಲಿದ್ದಾರೆ.
ಎ.11ರಂದು ಭಾರತೀಯ ಚೆಸ್ ಆಟಗಾರರು ಪರಿಹಾರ ನಿಧಿಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಪ್ರಮುಖ ಚೆಸ್ ಆಟಗಾರರ ಜತೆ ಆಡುವ ಅವಕಾಶವನ್ನು ಚೆಸ್ ಅಭಿಮಾನಿಗಳಿಗೆ ಕಲ್ಪಿಸಿದ್ದಾರೆ. ಅಭಿಮಾನಿಗಳು ಈ ಒಳ್ಳೆಯ ಉದ್ದೇಶಕ್ಕೆ ಕೈಜೋಡಿಸಬೇಕೆಂದು ಆನಂದ್ ವಿನಂತಿಸಿಕೊಂಡಿದ್ದಾರೆ.
25 ಡಾಲರ್ ನೀಡಿ ಹೆಸರು ನೋಂದಾಯಿಸಿಕೊಂಡರೆ ಆರು ಅಗ್ರ ಆಟಗಾರರಲ್ಲಿ ಇಬ್ಬರ ಜತೆ ಅವರು ಚೆಸ್ ಆಡಬಹುದು. ಒಂದು ವೇಳೆ ಆನಂದ್ ಜತೆ ಆಡಲು ಬಯಸಿದರೆ ಅಂಥವರು ಕಡಿಮೆಪಕ್ಷ 150 ಡಾಲರ್ ನೀಡಿ ಹೆಸರು ನೋಂದಾಯಿಸಬೇಕಾಗಿದೆ.
ಆನಂದ್ ಮಾತ್ರವಲ್ಲದೇ ಕೊನೆರು ಹಂಪಿ, ಪಿ. ಹರಿಕೃಷ್ಣ, ಬಿ. ಆಧಿಬನ್, ವಿದಿತ್ ಗುಜರಾತಿ ಮತ್ತು ದ್ರೋಣವಲ್ಲಿ ಹರೀಕಾ ಅವರು ವಿಶ್ವದಾದ್ಯಂತ ಇರುವ ಚೆಸ್ ಅಭಿಮಾನಿಗಳೆದುರು ಶನಿವಾರ ಯುಎಇ ಸಮಯ ಸಂಜೆ 5 ಗಂಟೆಗೆ ಪೋರ್ಟಲ್ ಚೆಸ್ ಡಾಟ್ ಕಾಮ್ ಮೂಲಕ ಆಡಲಿದ್ದಾರೆ. ಇದರಲ್ಲಿ ಸಿಕ್ಕಿದ ಹಣವನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡಲಾಗುತ್ತದೆ.