ಜೇವರ್ಗಿ: ಪಟ್ಟಣಕ್ಕೆ ಶಾಶ್ವತವಾಗಿ ಕುಡಿಯವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾಲೂಕಿನ ಕಟ್ಟಿಸಂಗಾವಿ ಹತ್ತಿರ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ.
ಬೆಂಗಳೂರಿನಲ್ಲಿ ಸೋಮವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ 12.5 ಕೋಟಿ ರೂ. ವೆಚ್ಚದ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ. ಪ್ರತಿ ವರ್ಷ ಜೇವರ್ಗಿ ಪಟ್ಟಣಕ್ಕೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು.
ಕಟ್ಟಿಸಂಗಾವಿ ಹತ್ತಿರ ಜಾಕ್‌ವೆಲ್‌ನಿಂದ ಪೈಪ್‌ಲೈನ್ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ವಾರಕ್ಕೊಮ್ಮೆ ನೀರು ಸರಬರಾಜು ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಪುರಸಭೆ ವತಿಯಿಂದ ಪ್ರತಿ ವರ್ಷ ಕುಡಿಯುವ ನೀರಿಗಾಗಿ ಲಕ್ಷಾಂತರ ರೂ. ಖರ್ಚು ಮಾಡಿದರೂ ಸಮಸ್ಯೆ ಬಗೆಹರಿದಿರಲಿಲ್ಲ.
ಈ ಬಗ್ಗೆ ಹಲವಾರು ಬಾರಿ ಶಾಸಕ ಡಾ| ಅಜಯಸಿಂಗ್ ಅವರಿಗೆ ಮನವಿ ಕೂಡ ಮಾಡಲಾಗಿತ್ತು. ಕಳೆದ ಕೆಲವು ತಿಂಗಳ ಹಿಂದೆ ಶಾಸಕ ಡಾ| ಅಜಯಸಿಂಗ್ ಹಾಗೂ ಪುರಸಭೆ ಅಧ್ಯಕ್ಷರಾಗಿದ್ದ ಮಲ್ಲಮ್ಮ ಮಲ್ಲಣ್ಣ ಅವುಂಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ 12.5 ಕೋಟಿ ರೂ.ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ನಗರೋತ್ಥಾನ ಹಾಗೂ ಎಚ್‌ಕೆಆರ್‌ಡಿಬಿ ವತಿಯಿಂದ
ಅನುಮೋದನೆ ಪಡೆಯಲಾಗಿತ್ತು.
ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಕೂಡ ಅನುಮೋದನೆ ದೊರಕಿದೆ. ನಗರೋತ್ಥಾನ ವತಿಯಿಂದ 4.5 ಕೋಟಿ, ಎಚ್‌ಕೆಆರ್‌ಡಿಬಿ ವತಿಯಿಂದ 4 ಕೋಟಿ ಹಾಗೂ ಸಣ್ಣ ನೀರಾವರಿ ಇಲಾಖೆ ವತಿಯಿಂದ 4 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಈ ಭಾಗದ ಜನರ ಹಲವು ದಿನಗಳ ಬೇಡಿಕೆ ಶಾಶ್ವತವಾಗಿ ಬಗೆಹರಿದಂತಾಗಿದೆ. ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಡಾ| ಅಜಯಸಿಂಗ್ ದೂರವಾಣಿ ಮೂಲಕ ಉದಯವಾಣಿಗೆ ತಿಳಿಸಿದ್ದಾರೆ.