ಹೊಸಪೇಟೆ: ನಗರದ ಬಡನಾಗರಿಕರಿಗೆ ಮುಂಬರುವ ದಿನಗಳಲ್ಲಿ 3 ಸಾವಿರ ಮನೆಗಳನ್ನು ನಿರ್ಮಿಸಿ ಕೊಡಲು ಈಗಾಗಲೇ 25 ಎಕರೆ ಭೂಮಿ ಗುರುತಿಸಿ ಸರಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ಟೌವನ್ ರೀಡಿಂಗ್ ರೂಂ ಅವರಣದಲ್ಲಿ ಗುರುವಾರ ನಗರೋತ್ಥಾನದ 3ನೇ ಹಂತದ ಯೋಜನೆಡಿಯಲ್ಲಿ ನಗರದ
ವಿವಿಧ ವಾರ್ಡ್‌ಗಳಿಗೆ ಮುಂಜೂರಾದ 16 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 5 ವರ್ಷದ ಸರಕಾರದ ಅಧಿಕಾರದ ಅವಧಿಯಲ್ಲಿ ಜನಸಾಮಾನ್ಯರಿಗೆ ಸಾಕಷ್ಟು ಉಪಯುಕ್ತವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಿದೆ. ಹೊಸಪೇಟೆ ವಿಜಯನಗರ ವಿಧಾನ ಸಭೆಯ ಕ್ಷೇತ್ರದಲ್ಲೂ ಮಾಜಿ ಶಾಸಕ ಆನಂದ್‌ಸಿಂಗ್ ಅವರು ಸರಕಾರದಿಂದ ಹೆಚ್ಚಿನ ಅನುದಾನ ಪಡೆದು ಅಭಿವೃದ್ಧಿ ಮಾಡಿದ್ದಾರೆ ಎಂದರು.
ನಗರದ 35 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಮನೆ ಇಲ್ಲದ ಬಡವರಿಗೆ ನಗರದ ಹೊರವಲಯದಲ್ಲಿ ಮಾಜಿ ಶಾಸಕ ಆನಂದ್ ಸಿಂಗ್ ಅವರು 25 ಎಕರೆ ಭೂಮಿ ಗುರುತಿಸಿದ್ದು, ಉತ್ತಮ ರಸ್ತೆ,ಕುಡಿಯುವ ನೀರಿನ ವ್ಯವಸ್ಥೆಯನ್ನು ಒಳಗೊಂಡಂತೆ ಅಭಿವೃದ್ಧಿಪಡಿಸಿ ವಂತಿಗೆಯಂತೆ ಹಣ ಪಡೆದು 3 ಸಾವಿರ ನಿವೇಶನ ರಹಿತ ಬಡವರಿಗೆ 600 ಚದುರಡಿಯಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಹೇಳಿದರು.
ನಗರದಲ್ಲಿ ಈಗಾಗಲೇ 3 ಕಡೆಯಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಿದೆ. ಎಪಿಎಂಸಿ ಬಳಿಯಲ್ಲಿನ ಇಂದಿರಾ ಕ್ಯಾಂಟೀನ್ ಆರಂಭವಾಗಿದೆ. ಉಳಿದ ಎರಡು ಕ್ಯಾಂಟೀನ್‌ಗಳನ್ನು ಶ್ರೀಘವಾಗಿ ಆರಂಭ ಮಾಡುವುದಾಗಿ ಹೇಳಿದ ಅವರು, ರೈತರಿಗೆ 3ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ ನೀಡಿದೆ. ಇದನ್ನು ಗುಜರಾತಿನಲ್ಲಿ ಬಿಜಿಪಿ ತನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿದೆ. ರಾಜ್ಯವು ದೇಶದ ಇತರ ರಾಜ್ಯಗಳಿಗಿಂತ ಉತ್ತಮ ಆಡಳಿತ ನೀಡಿದ ಕೀರ್ತಿ ನಮ್ಮ ಮುಖ್ಯ ಮಂತ್ರಿಗಳಿಗಿದೆ ಎಂದರು.
ನಗರಕ್ಕೆ ಬಿಡುಗಡೆಯಾದ ಅನುದಾನದಲ್ಲಿ ನಗರ ಸಭೆಯ ಸದಸ್ಯರು ಗುಣ ಮಟ್ಟ ಕಾಮಗಾರಿ ಮಾಡಲು ಶ್ರಮವಹಿಸಬೇಕು. ನಗರಸಭೆಯ ಪೌರಾಯುಕ್ತರು ಬಡ ಜನರಿಂದ ಅರ್ಜಿ ಪಡೆದು ಸದಸ್ಯರೊಂದಿಗೆ ಫಲನುಭವಿಗಳ ಪಟ್ಟಿಯನ್ನು ಕೂಡಲೆ ಸಿದ್ಧಪಡಿಸಬೇಕು ಎಂದು ಹೇಳಿದರು.
ನಗರಸಭೆಯ ಪೌರಾಯುಕ್ತ ವಿ.ರಮೇಶ್ ಮಾತನಾಡಿದರು.ನಗರ ಸಭೆಯ ಅಧ್ಯಕ್ಷೆ ನಾಗಲಕ್ಷ್ಮೀ, ಸದಸ್ಯರಾದ ಜಿ. ಮಲ್ಲಿಕಾರ್ಜುನ, ಬಡವಲಿ, ಅಬ್ದುಲ್ ಖಾದೀರ್, ಧನುಲಕ್ಷ್ಮೀ, ಮಾಜಿ ಶಾಸಕರಾದ ಗುಜ್ಜಲ ಜಯಲಕ್ಷ್ಮೀ, ರತ್ ಸಿಂಗ್, ಎಚ್.ಎನ್. ಎಫ್. ಇಮಾಮ್
ನಿಯಾಜಿ, ಡಾ| ತಾರಿಹಳ್ಳಿ ವೆಂಕಟೇಶ್, ಎಲ್. ಸಿದ್ದನಗೌಡ, ಆಯ್ನಾಳಿ ತಿಮ್ಮಾಪ್ಪ, ಹುಡಾ ಅಧ್ಯಕ್ಷ ವೆಂಕಟೇಶ್ ರೆಡ್ಡಿ, ಗಣೇಶ್ ಕೆ.ಎಲ್, ಎಸ್. ಸ್ವಾಮಿ ಸೇರಿದಂತೆ ಇತರರು ಇದ್ದರು. ಮಾ.ಬ.ಸೋಮಣ್ಣ ನಿರೂಪಿಸಿದರು.