ಬೆಂಗಳೂರು: ಬೇಸಿಗೆಯ ಹಿನ್ನೆಲೆಯಲ್ಲಿ ಪಾಲಿಕೆಯಿಂದ ನಗರದ ವಿವಿಧೆಡೆ ನೀರು ಪೂರೈಕೆಗೆ ಅನುಮತಿ ಕೇಳಿ ಬಿಬಿಎಂಪಿ ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಕಳೆದ ವಾರ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಗರದಲ್ಲಿ ವಾಟರ್ ಟ್ಯಾಂಕರ್ ನೀರಿನ ಉದ್ಯಮದ ಕಾಳದಂಧೆಗೆ ಕಡಿವಾಣ ಹಾಕಲು ಸಮಿತಿ ರಚನೆ,
-ದರ ಪಟ್ಟಿ ನಿಗದಿ ಮತ್ತು ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಕುರಿತು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯಂರ್ ನೇತೃತ್ವದಲ್ಲಿ 11 ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದರು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಟ್ಯಾಂಕರ್ ನೀರಿನ ದರ ನಿಗದಿ ಮತ್ತು ನಿಯಮ ರಚನೆಗೆ ಚುನಾವಣೆ ಆಯೋಗ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿ ಅನುಮತಿ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಆಯುಕ್ತರು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪಾಲಿಕೆಯ ಪ್ರಸ್ತಾವನೆಯ ಕುರಿತು ಚರ್ಚಿಸಿರುವ ಪರಿಶೀಲನಾ ಸಮಿತಿಯು ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಹಾಗೂ ಪರವಾನಗಿ ಹಾಗೂ ದರ ನಿಗದಿಗೆ ಒಪ್ಪಿಗೆ ನೀಡಿದೆ. ಇದೀಗ ಪ್ರಸ್ತಾವನೆಯನ್ನು ಚುನಾವಣಾ ಆಯೋಗದ ಒಪ್ಪಿಗೆಗೆ ಕಳುಹಿಸಲಾಗಿದ್ದು, ಆಯೋಗವು ಅನುಮತಿ ನೀಡುವ ಭರವಸೆಯಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.
ಆಯೋಗದ ಅನುಮತಿ ಸಿಕ್ಕಿದ ಬಳಿಕ 198 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಗೆ ಕೊಳವೆ ಬಾವಿ ಕೊರೆಯುವುದು, ಪೈಪ್‌ಲೈನ್ ಅಳವಡಿಕೆ, ಟ್ಯಾಂಕರ್ ನೀರು ಒದಗಿಸುವುದು ಸೇರಿದಂತೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.