Advertisement

ಡಿಪಿಆರ್‌ಗೆ ಅನುಮೋದನೆ; ಜೋಶಿ ಮೆರವಣಿಗೆ

04:37 PM Jan 02, 2023 | Team Udayavani |

ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಸರಕಾರದಿಂದ ಅನುಮೋದನೆ ಕೊಡಿಸುವಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆಂದು ಪಕ್ಷದ ಕಾರ್ಯಕರ್ತರು, ಬೆಂಬಲಿಗರು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಅಭಿನಂದನೆ ಸಲ್ಲಿಸಿದರು.

Advertisement

ರವಿವಾರ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಕಿತ್ತೂರು ಚನ್ನಮ್ಮ ವೃತ್ತದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿಸಿದರು. ಡಾ| ಬಿ.ಆರ್‌. ಅಂಬೇಡ್ಕರ್‌, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ವಿವಿಧ ಕಲಾ ತಂಡಗಳು ಪಾಲ್ಗೊಂಡಿದ್ದವು. ಪಕ್ಷದ ರೈತ ಮೋರ್ಚಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆ ಅನುಮತಿ ಬೇಕಾಗಿಲ್ಲ. ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಕಳುಹಿಸುವ ಪತ್ರದಲ್ಲಿ ದಿನಾಂಕ ಹುಡುಕುವ ಸಣ್ಣ ಮಟ್ಟಕ್ಕೆ ಕಾಂಗ್ರೆಸ್‌ ಇಳಿದಿದ್ದು, ಇದು ಅವರ ಡೇಟ್‌ ಎಕ್ಸ್‌ಪೈರಿ ಆಗುತ್ತಿರುವುದನ್ನು ತೋರಿಸುತ್ತಿದೆ. ಈ ಯೋಜನೆಗೆ ಗೋವಾದಲ್ಲಿ ಸೋನಿಯಾ ಗಾಂಧಿ ವಿರೋಧ ಮಾಡಿದ್ದರು. ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಸರಕಾರ ನಿರ್ಮಾಣ ಹಂತದಲ್ಲಿ ಕಾಲುವೆಗೆ ಅಡ್ಡಗೋಡೆ ಕಟ್ಟಿಸಿ ನೀರು ಬಾರದಂತೆ ಮಾಡಿದ್ದಾರೆ. ಇದೀಗ ಮಹದಾಯಿ ಹೆಸರಲ್ಲಿ ಸಮಾವೇಶ ಮಾಡಲು ಮುಂದಾಗಿರುವುದು ನಾಚಿಕೆಗೇಡಿನ ವಿಚಾರ ಎಂದರು.

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬಿಜೆಪಿ ಹೋರಾಟ ಹಾಗೂ ಕೊಡುಗೆ ದೊಡ್ಡದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಸಿ.ಸಿ. ಪಾಟೀಲ, ತಾವು ಸೇರಿದಂತೆ ಹಲವು ನಾಯಕರು ಹೋರಾಟ ಮಾಡಿದ್ದರು. ಇಂದು ಅದೇ ಬಿಜೆಪಿ ಸರಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದೆ. ಆದಷ್ಟು ಶೀಘ್ರದಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು.

ಯೋಜನೆಯಿಂದ ಯಾವ ತಾಲೂಕುಗಳಿಗೆ ಲಾಭ ಆಗುತ್ತಿದೆಯೋ ಅಲ್ಲಿ ರಥಯಾತ್ರೆ ಮಾಡಲಾಗುವುದು. ಡಿಪಿಆರ್‌ಗೆ ಅನುಮೋದನೆ ದೊರೆಯುವಲ್ಲಿ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಸಚಿವರ, ಶಾಸಕರ ಪ್ರಯತ್ನವಿದೆ ಎಂದು ಹೇಳಿದರು. ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ಮಾಜಿ ಶಾಸಕರಾದ ವೀರಭದ್ರಪ್ಪ ಹಾಲಹರವಿ, ಸೀಮಾ ಮಸೂತಿ, ಮುಖಂಡರಾದ ಬಸವರಾಜ ಕುಂದಗೋಳಮಠ, ದತ್ತಮೂರ್ತಿ ಕುಲಕರ್ಣಿ, ಚಂದ್ರಶೇಖರ ಗೋಕಾಕ, ತಿಪ್ಪಣ್ಣ ಮಜ್ಜಗಿ, ರವಿ ನಾಯಕ ಇನ್ನಿತರರಿದ್ದರು.

Advertisement

ಶೆಟ್ಟರ-ಮುನೇನಕೊಪ್ಪ ಗೈರು; ವಿಶೇಷ ಅರ್ಥ ಬೇಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಅಭಿನಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾಜಿ
ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಗೈರು ಎದ್ದು ಕಾಣುತ್ತಿತ್ತು. ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ.ನಿಂಬಣ್ಣವರ, ಅಮೃತ ದೇಸಾಯಿ ಇದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಜೋಶಿ, ಮೆರವಣಿಗೆ ಹಾಗೂ ಸ್ವಾಗತ ಕಾರ್ಯಕ್ರಮ ನನಗೂ ತಿಳಿದಿರಲಿಲ್ಲ. ಬೆಂಬಲಿಗರು ಹಾಗೂ ಕಾರ್ಯಕರ್ತರು ಅನಿರೀಕ್ಷಿತ ಕಾರ್ಯಕ್ರಮ ಆಯೋಜಿಸಿದ್ದರಿಂದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹಾಗೂ ಶಂಕರ ಪಾಟೀಲ ಅವರಿಗೆ ಗೊತ್ತಿಲ್ಲದಿರಬಹುದು. ಹೀಗಾಗಿ ಅವರು ಬಂದಿರಲಿಕ್ಕಿಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು

Advertisement

Udayavani is now on Telegram. Click here to join our channel and stay updated with the latest news.

Next