Advertisement

ವಿವೇಚನಾ ನಿಧಿ ಬಳಕೆಗೆ ಅನುಮೋದನೆ

03:08 PM Mar 04, 2017 | Team Udayavani |

ಧಾರವಾಡ: ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗೆ ಜಿಪಂ ಅಧ್ಯಕ್ಷರ 50 ಲಕ್ಷ ರೂ. ವಿವೇಚನಾ ನಿಧಿ ಬಳಕೆಗೆ ಶುಕ್ರವಾರ ನಡೆದ ಜಿಪಂ ಸಾಮಾನ್ಯ ಸಭೆ ಅನುಮೋದನೆ ನೀಡಿತು.  ಬರಗಾಲದಿಂದ ನವಲಗುಂದ ತಾಲೂಕಿನ ಆರು ಹಳ್ಳಿಗಳಿಗೆ ಕುಡಿಯುವ ನೀರಿನ ಕೊರತೆ ಎದುರಾಗಿದೆ.

Advertisement

ಆಯಟ್ಟಿ, ತಿರ್ಲಾಪೂರ, ಮಣಕವಾಡ, ತುಪ್ಪದ ಕುರಹಟ್ಟಿ, ಹಳ್ಳಿಕೇರಿ ಮತ್ತು ಶಿಶ್ವಿ‌ನಹಳ್ಳಿ ಗ್ರಾಮಗಳಿಗೆ ಮಲಪ್ರಭಾ ಕಾಲುವೆಯಿಂದ ನೀರು ಗುರುತ್ವದ ಆಧಾರದ ಮೇಲೆ ಹರಿಯಲು ಸಾಧ್ಯವಿಲ್ಲ. ಹೀಗಾಗಿ ಈ ಕೆರೆಗಳಿಗೆ ನೀರು ತುಂಬಲು ಕಾಲುವೆಯಿಂದ ನೀರನ್ನು ಪಂಪ್‌ ಮಾಡಬೇಕು. ಅದಕ್ಕಾಗಿ ಈ ಹಿಂದೆ ಸಿಆರ್‌ಎಫ್‌ ಮತ್ತು ಟಾಸ್ಕ್ಫೋರ್ಸ್‌ನ ಹಣಕಾಸು ನೆರವು ನೀಡಲಾಗುತ್ತಿತ್ತು. 

ಆದರೆ ಕಳೆದ ವರ್ಷದಿಂದ ಅದು ಬಂದ್‌ ಆಗಿದೆ. ಹೀಗಾಗಿ ಬೇರೆ ಮೂಲದಿಂದ ಹಣ ನೀಡುವಂತೆ ಜಿಪಂ ಸದಸ್ಯ ಅಂದಾನಯ್ಯ ಹಿರೇಮಠ ಕೋರಿದರು. ಸಭೆಯಲ್ಲಿ ಚರ್ಚಿಸಿದ ಬಳಿಕ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ಜಿಪಂ ಅಧ್ಯಕ್ಷರ ಕೋಟಾದಲ್ಲಿ 50ಲಕ್ಷ ರೂ.ಗಳಿದ್ದು ಅದನ್ನು ಬರಗಾಲದ ಹಿನ್ನೆಲೆಯಲ್ಲಿ ತುರ್ತು ಕಾಮಗಾರಿಗಳಿಗೆ ಬಳಸಿಕೊಳ್ಳಬಹುದಾಗಿದ್ದು,ಅದರ ಬಳಕೆಗೆ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸುವಂತೆ ಕೋರಿದರು.

ಜಿಪಂ ಸಿಇಒ ಸ್ನೇಹಲ್‌ ಕೂಡ ಇದಕ್ಕೆ ಧ್ವನಿ ಗೂಡಿಸಿದರು. ಆದರೆ ಮೊದಲು ಕೆಲವು ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ನಮ್ಮ ಕ್ಷೇತ್ರಗಳಿಗೂ ತುರ್ತು ಹಣಕಾಸು ನೆರವು ಅಗತ್ಯವಿದ್ದು, ಅದಕ್ಕೆ ನಮಗೂ ಹಣ ಕೊಡಿ ಎಂದು ಕೇಳಿದರು. ಮಧ್ಯ ಪ್ರವೇಶಿಸಿದ ಜಿಪಂ ಸಿಇಒ ಸ್ನೇಹಲ್‌, ಇದು ಜಿಪಂ ಅಧ್ಯಕ್ಷರ ವಿವೇಚನಾ ನಿಧಿಯಾಗಿದ್ದು, ಒಟ್ಟು 50 ಲಕ್ಷ ರೂ.ಗಳಿಗೆ ಅನುಮತಿ ನೀಡಿ.

ನಿಮ್ಮ ಕ್ಷೇತ್ರಗಳಲ್ಲಿನ ತುರ್ತು ಕಾಮಗಾರಿಗಳಿಗೆ ಬೇರೆ ಯೋಜನೆಗಳಡಿ ಹಣ ಒದಗಿಸುವುದಾಗಿ ಹೇಳಿದರು. ನಂತರ ಸರ್ವ ಸದಸ್ಯರು ಸಭೆಯಲ್ಲಿ 50 ಲಕ್ಷ ರೂ.ಗಳ ಬಳಕೆಗೆ ಅನುಮತಿ ನೀಡಿದರು. ಇನ್ನು ಬಹುತೇಕ ಸದಸ್ಯರು ತಮ್ಮ ಕ್ಷೇತ್ರಗಳಲ್ಲಿ ಸ್ಥಾಪನೆಯಾಗಿರುವ ಶುದ್ಧ ನೀರಿನ ಘಟಕಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವ, ಕೆಲವಷ್ಟು ಕಡೆಗಳಲ್ಲಿ  ಇನ್ನೂ ಘಟಕಗಳು ಆರಂಭಗೊಳ್ಳದೇ ಇರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. 

Advertisement

ಇದಕ್ಕೆ ಉತ್ತರಿಸಿದ ಭೂ ಸೇನಾ ನಿಗಮದ ಹಿರಿಯ ಅಧಿಕಾರಿ ಅಬ್ದುಲ್‌ ರೆಹಮಾನ್‌, ಜಿಲ್ಲೆಯಲ್ಲಿ ಒಟ್ಟು 196 ಶುದ್ಧ ನೀರಿನ ಘಟಕ ಸ್ಥಾಪನೆ ಗುರಿ ಇದೆ. ಈ ಪೈಕಿ ಸದ್ಯಕ್ಕೆ 173 ಘಟಕ ಸ್ಥಾಪನೆಯಾಗಿವೆ. ಅದರಲ್ಲಿ 142 ಸದ್ಯಕ್ಕೆ ಕಾರ್ಯ ನಿರ್ವಹಿಸುವ ಹಂತ ತಲುಪಿದ್ದು, ರ್ಚ 12ರೊಳಗೆ 3ನೇ ಹಂತದ ವ್ಯಾಪ್ತಿಯ ಎಲ್ಲ 173 ಶುದ್ಧ ನೀರಿನ ಘಟಕಗಳು ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು ಎಂದರು. 

ಇದೀಗ ಶುದ್ಧ ನೀರಿನ ಘಟಕ ಸ್ಥಾಪಿಸಿದರೂ ಜಿಲ್ಲೆಯ 15 ಗ್ರಾಮಗಳಲ್ಲಿ ಕುಡಿಯಲು ನೀರಿಲ್ಲ. ಈ ಘಟಕಕ್ಕೆ ಇನ್ನೂ ನೀರಿನ ಸಂಪರ್ಕ ನೀಡಲು ಆಗಿಲ್ಲ. 3 ಗ್ರಾಮಗಳ ಘಟಕಗಳು ಬೇರೆ ನೀರಿನ ಸಂಪನ್ಮೂಲದಿಂದ ಕಾರ್ಯ ನಿರ್ವಹಿಸಬಹುದು. ಆದರೆ 12 ಗ್ರಾಮಗಳಿಗಂತೂ ಜೂನ್‌ ವರೆಗೂ ನೀರು ಲಭಿಸುವುದು ಅಸಾಧ್ಯ ಎಂದರು. ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ.

ಅವುಗಳನ್ನು ಅಭಿವೃದ್ಧಿಗೊಳಿಸುವುದು, ಕೆಲವು ಕಡೆಗಳಲ್ಲಿ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವ 1200 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ ಈವರೆಗೂ ಕೇವಲ 42 ಶಾಲಾ ಕೊಠಡಿಗಳನ್ನು ನಿರ್ಮಿಸಲು ಕೇವಲ 3.5 ಕೋಟಿ ರೂ.ಅನುದಾನ ಮಾತ್ರ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೂರ್‌ ಮಾಹಿತಿ ನೀಡಿದರು. ಇದಕ್ಕೆ ಎಲ್ಲ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಹೆಚ್ಚು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವಂತೆ ಕೋರಿದರು.

ಸದಸ್ಯರ ಆಗ್ರಹಕ್ಕೆ ಮಣಿದ ಸಿಇಒ ಸ್ನೇಹಲ್‌, ಈ ಕುರಿತು ಸರ್ಕಾರಕ್ಕೆ ಅಗತ್ಯ ಅನುದಾನ ನೀಡುವಂತೆ ಶೀಘ್ರ ಪತ್ರ ಬರೆಯುವುದಾಗಿ ಹೇಳಿದರು. ನವಲಗುಂದ ಶಾಸಕ ಎನ್‌.ಎಚ್‌.ಕೋನರೆಡ್ಡಿ, ಜಿಪಂನ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ರೇಣುಕಾ ಇಬ್ರಾಹಿಂಪೂರ, ಎನ್‌.ಎನ್‌.ಪಾಟೀಲ್‌, ಜಿಪಂ ಉಪ ಕಾರ್ಯದರ್ಶಿ ವೈ.ಡಿ.ಕುನ್ನಿಭಾವಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next