Advertisement

ಮರೆಗುದ್ದಿ ಏತ ನೀರಾವರಿ ಯೋಜನೆಗೆ ಶೀಘ್ರ ಅನುಮೋದನೆ: ಗೋವಿಂದ ಕಾರಜೋಳ

02:40 PM Dec 20, 2022 | Team Udayavani |

ಬೆಳಗಾವಿ: ಮರೆಗುದ್ದಿ ಏತ ನೀರಾವರಿ ಯೋಜನೆಗೆ 2018-19ನೇ ಸಾಲಿನ ಬಜೆಟ್‌ ಭಾಷಣದಲ್ಲಿ 100 ಕೋಟಿ ರೂ. ಘೋಷಿಸಲಾಗಿತ್ತು. ಆದರೆ, ಆಯವ್ಯಯದಲ್ಲಿ ಅನುದಾನವನ್ನು ಹಂಚಿಕೆ ಮಾಡಿಲ್ಲ. ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಸಿ, ಅನುಮೋದನೆ ತೆಗೆದುಕೊಳ್ಳುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

Advertisement

ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಜಮಖಂಡಿ ಶಾಸಕ ಆನಂದ್‌ ಸಿದ್ದು ನ್ಯಾಮಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್‌ ಈ ವಿಚಾರವಾಗಿ ಪ್ರತಿ ನಿತ್ಯ ನನ್ನ ಬೆನ್ನತ್ತಿದ್ದಾರೆ. ಅವರ ಸೊಸೆ ಮರೆಗುದ್ದಿಯಲ್ಲಿದ್ದು, ಅವರ ಬೀಗರೂರಿಗೆ ಯೋಜನೆಯನ್ನು ಮಾಡಬೇಕೆಂದು ಹೇಳುತ್ತಿದ್ದಾರೆ. ಆದ್ದರಿಂದ ಮುಂದಿನ ಸಭೆಯಲ್ಲಿ ಮಂಡಳಿ ಮುಂದೆ ತೆಗೆದುಕೊಂಡು ಬಂದು ಯೋಜನೆಗೆ ಅನುಮೋದನೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ತಪ್ಪು ಉತ್ತರ ನೀಡಿದ್ದಾರೆ ಎಂಬ ಈಶ್ವರ್‌ ಖಂಡ್ರೆ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲ ಉತ್ತರವನ್ನು ಸರಿಯಾಗಿಯೇ ನೀಡಿದ್ದೇವೆ. ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಏಕಂದರೆ ಸರ್ಕಾರದ ಕಚೇರಿಯಲ್ಲಿರುವ ದಾಖಲೆಗಳನ್ನು ನೋಡಿಯೇ ಉತ್ತರ ನೀಡಿದ್ದೇವೆ. ಕೊಂಗ್ಣಿ ನೀರಾವರಿ ಯೋಜನೆಯನ್ನು ಒಂದು ತಿಂಗಳು ಮುಗಿಸಿ, ನಿಮ್ಮನ್ನು ಕರೆದು ಉದ್ಘಾಟನೆ ಮಾಡಿಸುತ್ತೇನೆ. ಮಾಣಿಕೇಶ್ವರ ಮತ್ತು ಹಾರ್ನಳ್ಳಿ ಯೋಜನೆ ಪ್ರಗತಿಯಲ್ಲಿದ್ದು, ಅದರ ಕಾರ್ಯವನ್ನು ವೇಗಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದರು.

ಇದನ್ನೂ ಓದಿ:ಅಧಿಕಾರದಲ್ಲಿ ಮುಂದುವರಿಯಲು ಬಿಜೆಪಿ ಅರ್ಹತೆ ಕಳೆದುಕೊಂಡಿದೆ: ರಣದೀಪ್ ಸುರ್ಜೇವಾಲಾ

ಮೇಕರ್‌ ಮತ್ತು ಬಸವಕಲ್ಯಾಣ ಏತ ನೀರಾವರಿ ಯೋಜನೆಯಲ್ಲಿ 1.5 ಟಿಎಂಸಿ ನೀರನ್ನು ಬಳಸಲು ಈಗಾಗಲೇ ಅದಕ್ಕಾಗಿ ಯೋಜನೆ ರೂಪಿಸಿದ್ದು, ಅದಕ್ಕೆ ತಕ್ಷಣ ಆಡಳಿತಾತ್ಮಕ ಅನುಮೋದನೇ ನೀಡಿ, ಕೆಲಸ ಪ್ರಾರಂಭಿಸಲು ಸೂಚನೆ ನೀಡುತ್ತೇನೆ ಎಂದು ಹೇಳಿದರು. ಇನ್ನು, ಅವರ ಕ್ಷೇತ್ರದ 4 ಬ್ಯಾರೇಜ್‌ಗಳಿಗೆ ನೀರು ಹೋಗುತ್ತಿಲ್ಲ ಎಂದು ಖಂಡ್ರೆ ಹೇಳಿದ್ದಾರೆ. ಅದರ ಬಗ್ಗೆ ನಮ್ಮ ಅಧಿಕಾರಿಗಳ ಜೊತೆ ಸಭೆ ನಡೆಸಿ ನೀರು ಹೋಗುವಂತೆ ಮಾಡುತ್ತೇವೆ ಎಂದರು.

Advertisement

ಗೋದಾವರಿ ಬೇಸಿನ್‌ನ ನೀರು ಬಳಕೆ

ಬಂಡೆಪ್ಪ ಖಾಶೆಂಪುರ್‌ ಅವರು ಗೋದಾವರಿ ಬೇಸಿನ್‌ ನಲ್ಲಿ ನಮ್ಮ ಪಾಲಿನ 22.37 ಟಿಎಂಸಿ ನೀರನ್ನು ನಾವು ಬಳಕೆ ಮಾಡಿಕೊಳ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ನಾವು ನೀರನ್ನು ಬಳಸಿಕೊಳ್ಳುತ್ತಿದ್ದೇವೆ. ವಿವಿಧ ಯೋಜನೆಗಳನ್ನು ಅನುಮೋದನೆ ಮಾಡಿದ್ದೇವೆ. ಕೆಲವು ಯೋಜನೆಗಳು ಪೂರ್ಣಗೊಂಡಿವೆ, ಕೆಲವು ಯೋಜನೆಗಳು ಪ್ರಗತಿಯಲ್ಲಿವೆ. ಖಂಡಿತವಾಗಿಯೂ ಗೋದಾವರಿ ಬೇಸಿನ್‌ನಲ್ಲಿ ಬಂದಿರುವ ನೀರನ್ನು ಬಳಸಿಕೊಳ್ತೀವಿ ಎಂದು ಹೇಳಿದರು.

ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡರು ಕೆರೆ ತುಂಬಿಸುವ ವಿಚಾರದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಬಾಣಾವರ ಕೆರೆ ಸೇರಿ 7 ಕೆರೆಗಳನ್ನು ಕೆರೆ ತುಂಬುವ ಯೋಜನೆಗೆ ಸೇರ್ಪಡೆ ಮಾಡುತ್ತೇವೆ ಎಂದು ಹೇಳಿದರು. ಇನ್ನು, ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಕಿತ್ತೂರು ಶಾಸಕ ದೊಡ್ಡನಗೌಡರ್‌ ಮಹಾಂತೇಶ್‌ ಬಸವಂತರಾಯ್‌ ಅವರ ಪ್ರಶ್ನೆಗಳಿಗೆ ಇದೇ ವೇಳೆ ಉತ್ತರಿಸಿ ಅವರು ಪ್ರಸ್ತಾಪಿಸಿದ ವಿಚಾರಗಳನ್ನು ಆದಷ್ಟು ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next