ಬೆಂಗಳೂರು: ನಗರದ ವಿವಿಧೆಡೆ ಸುಮಾರು 16 ಕೋಟಿಗೂ ಅಧಿಕ ಮೊತ್ತದ ಮೂಲಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ವಾರ್ಡ್ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ.
ಕುಡಿಯುವ ನೀರು, ರಸ್ತೆ ಡಾಂಬರೀಕರಣ, ಒಳಚರಂಡಿ ಸೇರಿದಂತೆ ಜನರ ಅನುಕೂಲಕ್ಕಾಗಿ ಹತ್ತಕ್ಕೂ ಹೆಚ್ಚು ಕಾಮಗಾರಿಗಳಿಗೆ ಸಮಿತಿ ಈಚೆಗೆ ನಡೆದ ಸಭೆಯಲ್ಲಿ ಅನುಮೋದನೆ ನೀಡಿ, ತ್ವರಿತವಾಗಿ ಕೈಗೆತ್ತಿಕೊಳ್ಳುವ ಸಂಬಂಧ ತೀರ್ಮಾನ ಕೈಗೊಂಡಿದೆ.
ಈ ಪೈಕಿ ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಕಾಮಗಾರಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿ, ಕಾಮಗಾರಿಗೆ ತಕ್ಷಣ ಟೆಂಡರ್ ಕರೆಯುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 126ನೇ ವಾರ್ಡ್‌ನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.
ಬ್ಯಾಟರಾಯನಪುರ ಕ್ಷೇತ್ರದ 7ನೇ ವಾರ್ಡ್‌ನಲ್ಲಿ ರಂಗಮಂದಿರ ನಿರ್ಮಾಣ ಕಾಮಗಾರಿ ತ್ವರಿತವಾಗಿ ಕೈಗೊಳ್ಳುವುದು. ಪದ್ಮನಾಭ ನಗರದ 166ನೇ ವಾರ್ಡ್‌ನಲ್ಲಿ 2 ಕೋಟಿ ಅನುದಾನದಲ್ಲಿ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಯೋಜನೆಯನ್ನು ಅನುಮೋದಿಸಲಾಯಿತು.
ಮಲ್ಲೇಶ್ವರದ 45ನೇ ವಾರ್ಡ್‌ನಲ್ಲಿ ಜಿಮ್, ಹೆಲ್ತ್‌ಸೆಂಟರ್, ಗ್ರಂಥಾಲಯ ಕಟ್ಟಡ ಸೇರಿದಂತೆ ಸುಮಾರು 1.45 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ಟೆಂಡರ್‌ಗೆ ಅನುಮೋದನೆ, 35ನೇ ವಾರ್ಡ್‌ನಲ್ಲಿ 2 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಅನುಮೋದನೆ ನೀಡಲಾಯಿತು.
ವಾರ್ಡ್ ಸಂಖ್ಯೆ 76ರಲ್ಲಿ ಹರಿಶ್ಚಂದ್ರಘಾಟ್ ಮತ್ತು ಮೈಸೂರು ರಸ್ತೆಯ ವಿದ್ಯುತ್ ಚಿತಾಗಾರವನ್ನು ತಲಾ 50 ಲಕ್ಷದಲ್ಲಿ ಅಭಿವೃದ್ಧಿಪಡಿಸಲು ಅನುಮತಿ ನೀಡಲಾಯಿತು. ಸರ್ವಜ್ಞ ನಗರದ 28 ಮತ್ತು 29ನೇ ವಾರ್ಡ್‌ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಲು 75 ಲಕ್ಷ ರೂ., ಪುಲಕೇಶಿನಗರದಲ್ಲಿ 60ನೇ ವಾರ್ಡ್‌ನಲ್ಲಿ 2 ಕೋಟಿ ವೆಚ್ಚದಲ್ಲಿ ಬೀದಿ ದೀಪ, ಸ್ಮಶಾನ ಅಭಿವೃದ್ಧಿ, ಒಳಚರಂಡಿ ಸಂಪರ್ಕ,
ನೀರಿನ ವ್ಯವಸ್ಥೆ, ಶೌಚಾಲಯ ಮತ್ತಿತರ ಕಾಮಗಾರಿಯನ್ನು 14ನೇ ಹಣಕಾಸು ಅನುದಾನದಲ್ಲಿ ಕೈಗೊಳ್ಳಲಿರುವ ಕ್ರಿಯಾಯೋಜನೆಗೆ ಒಪ್ಪಿಗೆ ಸೂಚಿಸಲಾಯಿತು. ಅದೇ ರೀತಿ, ಚಿಕ್ಕಪೇಟೆಯ 141, 144 ಮತ್ತು 145ನೇ ವಾರ್ಡ್‌ನಲ್ಲಿ 60 ಲಕ್ಷ ವೆಚ್ಚದಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ತಿಳಿಸಿದ್ದಾರೆ.