Advertisement

ಅಟಲ್‌ ಭೂ ಜಲ್‌ ಯೋಜನೆಗೆ ಅನುಮೋದನೆ: ಸಿಎಂ

01:17 AM Aug 16, 2020 | mahesh |

ಬೆಂಗಳೂರು: ಅಂತರ್ಜಲ ನೀರಿನ ಬೇಡಿಕೆ ಹಾಗೂ ಸರಬರಾಜು ನಿರ್ವಹಣೆಗೆ ಸಮುದಾಯದ ಸಹಭಾಗಿತ್ವದಲ್ಲಿ ಒತ್ತು ನೀಡುವ “ಅಟಲ್‌ ಭೂ ಜಲ್‌ ಯೋಜನೆ’ಯನ್ನು 1,200 ಕೋ. ರೂ. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

Advertisement

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಭಾಷಣ ದಲ್ಲಿ ಈ ವಿಷಯ ಪ್ರಸ್ತಾವಿಸಿದ ಅವರು, ರಾಜ್ಯದ 14 ಜಿಲ್ಲೆಗಳ 41 ತಾಲೂಕುಗಳ 1,199 ಗ್ರಾಮ ಪಂಚಾಯತ್‌ಗಳಲ್ಲಿ 39,703 ಕಿ.ಮೀ. ಪ್ರದೇಶವು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ತಿಳಿಸಿದರು.

ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮೊಟ್ಟದ ಮೊದಲ ಬಾರಿಗೆ ಅನುಷ್ಠಾನ ಗೊಳಿಸು ತ್ತಿರುವ ರಾಜ್ಯ ನಮ್ಮದು. ಇದಕ್ಕಾಗಿ ಕೇಂದ್ರ ಸರಕಾರ ಹಾಗೂ ವಿಶ್ವ ಬ್ಯಾಂಕ್‌ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.

ಅನ್ನದಾತನ ರಕ್ಷಣೆ ನಮ್ಮ ಸರಕಾರದ ಪ್ರಥಮ ಆದ್ಯತೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ಪ್ರತಿ ವರ್ಷ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6 ಸಾ.ರೂ. ನೆರವಿನ ಜತೆಗೆ ನಮ್ಮ ಸರಕಾರವು ಹೆಚ್ಚುವರಿಯಾಗಿ 4 ಸಾ.ರೂ. ಆರ್ಥಿಕ ನೆರವು ಘೋಷಿಸಿದೆ. ಈ ಪೈಕಿ 2,000 ರೂ.ಗಳ ಮೊದಲ ಕಂತಿನ ಮೊತ್ತವನ್ನು ಸುಮಾರು 50 ಲಕ್ಷ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ ಎಂದರು.

ಕೈಗಾರಿಕಾಭಿವೃದ್ಧಿ ಸುಗಮಗೊಳಿಸುವಿಕೆ ಕಾಯ್ದೆ ಮೂಲಕ ಉದ್ಯಮಿಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಯುವ ಜನತೆಯಲ್ಲಿ ಕೌಶಲ ಅಭಿವೃದ್ಧಿಗೆ ಪ್ರೋತ್ಸಾಹ ಒದಗಿಸಲಾಗುತ್ತಿದೆ. ಜತೆಗೆ ಉದ್ಯಮಿಗಳಿಗೆ ಅಗತ್ಯವಿರುವ ಭೂಮಿ ಯನ್ನು ಖರೀದಿಸಲು ಪ್ರಸ್ತುತ ನಿಯಮಗಳನ್ನು ಸರಳೀಕರಿಸಲಾಗಿದೆ ಎಂದು ಹೇಳಿದರು.

Advertisement

ಕಲಬುರಗಿ, ಬೀದರ್‌ ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಿವೆ. ಶಿವಮೊಗ್ಗ ಕಿರು ವಿಮಾನ ನಿಲ್ದಾಣ ಕಾಮಗಾರಿಗಳು ವೇಗ ಪಡೆದು ಕೊಂಡಿವೆ. ಕಾರವಾರ ಹಾಗೂ ವಿಜಯಪುರ ವಿಮಾನ ನಿಲ್ದಾಣಗಳ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ 500 ಕೋ.ರೂ. ಯೋಜನೆಗಳನ್ನು ಹಮ್ಮಿಕೊಳ್ಳಲು ಅನುಮೋದನೆ ನೀಡಲಾಗಿದೆ.

ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾಕರ ಕಲ್ಯಾಣಕ್ಕೆ ನಮ್ಮ ಸರಕಾರ ಬದ್ಧವಾಗಿದೆ. ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯ ದೊರಕಬೇಕು ಎಂದರು.

ಕೊರೊನಾದ ಭಯ ಬೇಡ: ಸಿಎಂ
ಕೊರೊನಾ ಜಾಗತಿಕ ಪಿಡುಗಾಗಿದ್ದು, ನಾನು ಕೂಡ ಸೋಂಕಿಗೊಳಗಾಗಿ ಗುಣಮುಖನಾಗಿ ದ್ದೇನೆ. ನನ್ನ ಜನರು ಕೊರೊನಾ ಬಗ್ಗೆ ಆತಂಕ ಪಡ ಬೇಕಿಲ್ಲ. ಆದರೆ ಜಾಗರೂಕತೆಯಿಂದಿರಬೇಕು ಎಂದು ಯಡಿಯೂರಪ್ಪ ಹೇಳಿದರು.

ಪ್ರಧಾನಿ ಸಹಾಯ ಅಬಾಧಿತ
ಕೇಂದ್ರ ಸರಕಾರದ ಆತ್ಮ ನಿರ್ಭರ ಭಾರತ ಯೋಜನೆ ಭರವಸೆಯ ಹೊಂಗಿರಣ ವಾಗಿದೆ. ರಾಜ್ಯ ಸರಕಾರದ ಎಲ್ಲ ಪ್ರಯತ್ನ ಗಳಿಗೆ ಪ್ರಧಾನಿ ಮೋದಿ ಅವರ ಸಹಕಾರ ಮತ್ತು ಪ್ರೋತ್ಸಾಹವಿದೆ. ಪ್ರಧಾನಿ ಆಶಯದಂತೆ ವಿವಿಧ ವಲಯಗಳಲ್ಲಿ ಸ್ವಾವಲಂಬಿಯಾಗುವ ಗುರಿ ನಮ್ಮ ಸರಕಾರದ್ದಾಗಿದೆ ಎಂದು ಸಿಎಂ ಹೇಳಿದ್ದಾರೆ.

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಖಚಿತ
ಕಾರವಾರ, ಆ. 15: ಹುಬ್ಬಳ್ಳಿ – ಅಂಕೋಲಾ ರೈಲ್ವೇ ಮಾರ್ಗ ನಿರ್ಮಾಣ ಖಚಿತ ಎಂದು ಸಚಿವ ಶಿವರಾಮ ಹೆಬ್ಟಾರ್‌ ಹೇಳಿದರು. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಮತ್ತು ಕರಾವಳಿ ಬಂದರುಗಳನ್ನು ಬೆಸೆಯಲು ಈ ರೈಲ್ವೇ ಮಾರ್ಗ ಅಗತ್ಯವಾಗಿದೆ ಎಂದು ಹೇಳಿದರು.ಇದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕನಸಾಗಿದ್ದು, ಅದನ್ನು ಈಗಿನ ಸರಕಾರ ನನಸು ಮಾಡಲಿದೆ ಎಂದರು.

ಉಡುಪಿ, ದ.ಕ. ನೋಡಿ ಕಲಿಯೋಣ
ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್‌ನ ಮಾಜಿ ಶಾಸಕರು ಸಹಕರಿಸಬೇಕು. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ನೋಡಿ ನಾವು ಕಲಿಯಬೇಕಿದೆ. ಚುನಾವಣೆ ಸಂದರ್ಭ ರಾಜಕೀಯ ಮಾಡೋಣ. ಅಭಿವೃದ್ಧಿ ಯೋಜನೆಗೆ ತಕರಾರು ಮಾಡ ಬೇಡಿ ಎಂದು ಅವರು ವಿಪಕ್ಷಗಳಿಗೆ ಮನವಿ ಮಾಡಿದರು.

ದೇಶದ್ರೋಹ ಸಂಘಟನೆ ನಿಷೇಧ ನಿಶ್ಚಿತ
ಬಾಗಲಕೋಟೆ: ದೇಶದ್ರೋಹ ಕೃತ್ಯಗಳಲ್ಲಿ ತೊಡಗಿರುವ ರಾಜ್ಯದ ಯಾವುದೇ ಸಂಘಟನೆ ಇದ್ದರೂ ನಿಷೇಧ ಮಾಡುವುದು ನಿಶ್ಚಿತ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಡಿ. ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆಯಲ್ಲಿ ಗೃಹ ಇಲಾಖೆ ವೈಫಲ್ಯವಾಗಿಲ್ಲ. ಗಲಭೆಕೋರರ ವಿರುದ್ಧ ಪೊಲೀಸರು ಹೋರಾಟ ನಡೆಸಿದ್ದಾರೆ. ಅವರ ಮೇಲೂ ಹಲ್ಲೆ ನಡೆದಿದೆ. ಇಂತಹ ಘಟನೆಗಳ ಹಿಂದೆ ಯಾರೇ ಇದ್ದರೂ ಅವರ ಮಟ್ಟ ಹಾಕಲು ಸರಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ ಎಂದರು.

2021ರಲ್ಲಿ ವಿಜಯನಗರ ಜಿಲ್ಲೆ ರಚನೆ
ಹೊಸಪೇಟೆ, ಆ. 15: ಮುಂದಿನ ವರ್ಷ ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯಾಗಲಿದೆ ಎಂದು ಅರಣ್ಯ ಸಚಿವ ಆನಂದ ಸಿಂಗ್‌ ಹೇಳಿದರು.
ನಗರದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ರಚನೆ ಜತೆಯಲ್ಲಿ ಮುಂದಿನ ಸ್ವಾತಂತ್ರ್ಯೋತ್ಸವದ ಹೊತ್ತಿಗೆ ದೇಶದಲ್ಲೇ ಅತಿ ಎತ್ತರದ ಸ್ತಂಭವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಪ್ರತಿ ಜಿಲ್ಲೆಯೂ ನೀರಾವರಿಗೆ ಯೋಜನೆಗೆ
ಬೆಳಗಾವಿ: ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಸಮಗ್ರ ನೀರಾವರಿಗೆ ಒಳಪಡಿಸಲು ಸರಕಾರ ಬದ್ಧವಾಗಿದೆ ಎಂದು ನೀರಾವರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಕಳಸಾ – ಬಂಡೂರಿ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರಕಾರ ಈಗಾಗಲೇ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದು, ಈ ಯೋಜನೆ ಜಾರಿಗೆ ಅನುಕೂಲವಾಗುವಂತೆ ರಾಜ್ಯ ಸಚಿವ ಸಂಪುಟವೂ ಅನುಮೋದನೆ ನೀಡಿದೆ ಎಂದು ಜಾರಕಿಹೊಳಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next