ಶಿಡ್ಲಘಟ್ಟ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲಾದ್ಯಂತ ಸುಮಾರು 700 ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ನರೇಗಾ ಯೋಜನೆಯಡಿ ಜಲಸಂರಕ್ಷಣೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿರುವ ನರೇಗಾ ಯೋಜನೆಯನ್ನು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಶೇಷ ಉಸ್ತುವಾರಿ ವಹಿಸಲಾಗಿದೆ.
ಚೆಕ್ ಡ್ಯಾಂ: ಅಂರ್ತಜಲ ಮಟ್ಟ ವೃದ್ಧಿಗೊಳಿಸಲು ಮತ್ತು ಮಳೆನೀರು ಸಂರಕ್ಷಣೆ ಮಾಡಲು ಚೆಕ್‌ಡ್ಯಾಂ ಮತ್ತು ಬಹುಕಮಾನ್ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ 160 ಚೆಕ್‌ಡ್ಯಾಂ ಸಮೇತ ಜಿಲ್ಲಾದ್ಯಂತ ವಿವಿಧ ಬಗೆಯ 700 ಕಾಮಗಾರಿಗಳನ್ನು ನಡೆಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಕೆರೆ, ಕಲ್ಯಾಣಿ, ಸಂರಕ್ಷಣೆ: ಜಿಲ್ಲೆಯಲ್ಲಿ ಹಿಂಗಾರು ಆಗಮನದ ಮುನ್ನವೇ ಮಳೆ ನೀರು ಸಂರಕ್ಷಣೆ ಮಾಡಲು ಒತ್ತು ನೀಡಲಾಗಿದೆ. ಸರ್ಕಾರಿ ಕಟ್ಟಡಗಳು ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಕೆರೆ-ಕುಂಟೆ ಮತ್ತು ಕಲ್ಯಾಣಿಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ತಾಲೂಕಿನಲ್ಲಿ ಜಲಸಂರಕ್ಷಣೆ ಮಾಡಲು ಕೆರೆ-ಕುಂಟೆ ಮತ್ತು ಕಲ್ಯಾಣಿಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಶ್ಲಾಘಿಸಿದರು. ಜಿಲ್ಲೆಯಲ್ಲಿ ಇದೇ ಮಾದರಿ ಅನುಸರಿಸಿ ಕಾಮಗಾರಿ ನಡೆಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಬೆಳ್ಳೂಟಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಸುಸಜ್ಜಿತ ಕಲ್ಯಾಣಿ ಅಭಿವೃದ್ಧಿಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪರಿಶೀಲನೆ: ತಾಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಸಮೀಪ ಮಳೆ ನೀರು ಸಂರಕ್ಷಣೆ ಮಾಡಲು ಅಳವಡಿಸಿರುವ ಮಳೆ ಕೊಯ್ಲು ಪದ್ಧತಿ, ರಾಜೀವ್ ಗಾಂಧಿ ಸೇವಾ ಕೇಂದ್ರ, ಕುಂಟೆ ಅಭಿವೃದ್ಧಿ ಕಾಮಗಾರಿ ಹಾಗೂ ಚಿಕ್ಕದಾಸರಹಳ್ಳಿ ಬ್ಯಾಟರಾಯಸ್ವಾಮಿ ಸನ್ನಿಧಿಯಲ್ಲಿರುವ ಕಲ್ಯಾಣಿ, ಆನೂರು ಗ್ರಾಮದಲ್ಲಿ ಚೆಕ್‌ಡ್ಯಾಂ, ಪಲಿಚೇರ್ಲು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಗೆ ಕಾಂಪೌಂಡ್ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ರೈತರು ಸಹ ಮಳೆ ನೀರು ಸಂರಕ್ಷಣೆ ಮಾಡಲು ನರೇಗಾ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಲು ಪ್ರಚಾರ ಅಭಿಯಾನ ನಡೆಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಗುರುದತ್ ಹಗಡೆ, ಜಿಪಂ ಸದಸ್ಯ ತನುಜ, ತಾಪಂ ಸದಸ್ಯ ರಾಜಶೇಖರ್, ತಾಪಂ ಇಒ ಶಿವಕುಮಾರ್, ಯುವ ಮುಖಂಡ ಬೆಳ್ಳೂಟಿ ಸಂತೋಷ, ನಾಗೇಶ್, ಆನೂರು ಗ್ರಾಮ ಪಂಚಾಯಿತಿ ಪಿಡಿಒ ಅರುಣಾಕುಮಾರಿ, ಎಸ್.ದೇವಗಾನಹಳ್ಳಿ ಪಿಡಿಒ ಮಧು, ಚಿಕ್ಕಬಳ್ಳಾಪುರ ಜಿಲ್ಲಾ ಎಪಿಎಂಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ಮಳಮಾಚನಹಳ್ಳಿ ಗ್ರಾಪಂ ಸದಸ್ಯ ಡಿ.ಬೈರೇಗೌಡ, ಬಿ.ಬೈರೇಗೌಡ, ಕಾರ್ಯದರ್ಶಿ ರಾಜಣ್ಣ, ಕೃಷಿ ಇಲಾಖೆಯ ಅಧಿಕಾರಿ ಮಾಲತೇಶ್ ಉಪಸ್ಥಿತರಿದ್ದರು.