ಬಿಹಾರ:ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ಎಂಟು ವರ್ಷಗಳ ಕಾಲ ದೀರ್ಘ ಸಮಯದಲ್ಲಿ ನಿರ್ಮಿಸಿದ್ದ ಸೇತುವೆ ಉದ್ಘಾಟನೆಗೊಂಡ 29 ದಿನದೊಳಗೆ ಕೊಚ್ಚಿಕೊಂಡು ಹೋದ ಘಟನೆ ಬಿಹಾರದಲ್ಲಿ ನಡೆದಿದೆ.
ಕಳೆದ ತಿಂಗಳು ಮುಖ್ಯಮಂತ್ರಿ ನಿತೀಶ್ ಕುಮಾರ್ ಗೋಪಾಲ್ ಗಂಜ್ ನಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆಯನ್ನು ಉದ್ಘಾಟಿಸಿದ್ದರು. ಇದೊಂದು ಮಹತ್ತರವಾದ ಯೋಜನೆಯಾಗಿತ್ತು. ಈ ಸೇತುವೆ ಬಿಹಾರದ ಎರಡು ಪ್ರಮುಖ ಜಿಲ್ಲೆಗಳನ್ನು ಸಂಪರ್ಕಿಸುವ ಕೊಂಡಿಯಾಗಿತ್ತು ಎಂದು ವರದಿ ತಿಳಿಸಿದೆ. ಆದರೆ ಭಾರೀ ಮಳೆಯಿಂದಾಗಿ ಗಂಡಕ್ ನದಿ ತುಂಬಿ ಹರಿದ ಪರಿಣಾಮ ಸೇತುವೆ ಕೊಚ್ಚಿಕೊಂಡು ಹೋಗಿದೆ. ಈ ಬಗ್ಗೆ ವಿಪಕ್ಷಗಳು ತೀವ್ರ ಆಕ್ರೋಶ ಪಡಿಸಿವೆ.
ಗಂಡಕ್ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ನೂತನ ಸೇತುವೆ ಕೊಚ್ಚಿಹೋದ ನಂತರ ವಿಪಕ್ಷಗಳು ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿವೆ. ಸೇತುವೆ ನಿರ್ಮಿಸಲು ಈ ಭಾಗದ ಜನರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು, ಕೊನೆಗೂ ಸುಮಾರು 8 ವರ್ಷಗಳ ನಂತರ ಪೂರ್ಣಗೊಂಡಿದ್ದ ಸೇತುವೆಯನ್ನು ಕಳೆದ ತಿಂಗಳಷ್ಟೇ ನಿತೀಶ್ ಉದ್ಘಾಟಿಸಿದ್ದರು.
ಸತ್ತಾರ್ ಘಾಟ್ ಸೇತುವೆ ಗಾಗಿ ನಿತೀಶ್ ಕುಮಾರ್ 2012ರ ಏಪ್ರಿಲ್ 5ರಂದು ಶಂಕುಸ್ಥಾಪನೆ ಮೂಲಕ ಯೋಜನೆಗೆ ಚಾಲನೆ ನೀಡಿದ್ದರು. 1.44 ಕಿಲೋ ಮೀಟರ್ ಉದ್ದದ ಸೇತುವೆಗೆ 263.47 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈ ಸೇತುವೆಯಿಂದಾಗಿ ಗೋಪಾಲ್ ಗಂಝ್, ಸರಣ್ ಮತ್ತು ಪೂರ್ವ ಚಂಪಾರಣ್ ಜಿಲ್ಲೆಗಳ ನಡುವಿನ ದೂರವನ್ನು ಕಡಿಮೆಗೊಳಿಸುವುದು ಇದರ ಉದ್ದೇಶವಾಗಿತ್ತು.
ಆದರೆ ಕಳಪೆ ಕಾಮಗಾರಿಯಿಂದ 29 ದಿನಗಳಲ್ಲಿಯೇ ಸೇತುವೆ ಕೊಚ್ಚಿಹೋಗಿರುವುದಕ್ಕೆ ವಿರೋಧ ಪಕ್ಷದ ತೇಜಸ್ವಿ ಯಾದವ್, ಬಿಹಾರ್ ಕಾಂಗ್ರೆಸ್ ಪಕ್ಷದ ಮುಖಂಡ ಮದನ್ ಮೋಹನ್ ಝಾ ಎನ್ ಡಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.