Advertisement

ವಿಧಾನ-ಕದನ 2023: ಈ ಬೇಡಿಕೆಗಳಿಗೇ ವಯಸ್ಸು ಆಯಿತು…ಅರಣ್ಯವಾಸಿಗಳಿಗೆ ಬೆಳಕು ಬೇಕು

12:35 AM Mar 31, 2023 | Team Udayavani |

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಪಿಲತ್ತಡಿ, ಮುತ್ತಾಜೆ, ಮಂಜಲ, ಎರ್ಮಲೆ
ಪ್ರದೇಶಗಳಲ್ಲಿ ವಾಸಿಸುತ್ತಿರುವ 17 ಮಲೆ ಕುಡಿಯ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕ ಬೇಕೆಂಬುದು ಹಳೆಯ ಬೇಡಿಕೆ.

Advertisement

ಅರಣ್ಯ ತಪ್ಪಲಿನ ಈ ಹಳ್ಳಿಗಳಲ್ಲಿ ಈ ಹಿಂದೆ 30 ಕ್ಕೂ ಹೆಚ್ಚು ಕುಟುಂಬಗಳಿದ್ದವು. ಆದರೆ ನಕ್ಸಲ್‌ ಬಾಧಿತ ಪ್ರದೇಶಗಳೆಂದು ಸರಕಾರ ಘೋಷಿಸಿದ್ದರಿಂದ 10ಕ್ಕೂ ಅಧಿಕ ಕುಟುಂಬಗಳು ಸರಕಾರದ ಪುನರ್ವಸತಿ ಪ್ಯಾಕೇಜ್‌ಗೆ ಸಮ್ಮತಿಸಿ, ಸರಕಾರ ನೀಡಿದ ಪರಿಹಾರವನ್ನು ಸ್ವೀಕರಿಸಿ ಅರಣ್ಯದಿಂದ ಹೊರಬಂದರು. ಆದರೆ ಉಳಿದವರು ಇನ್ನೂ ನಾಗರಿಕ ಸವಲತ್ತುಗಳ ಕೊರತೆಯ ಮಧ್ಯೆ ಅರಣ್ಯದಲ್ಲೇ ಇದ್ದಾರೆ.

ಐದು ವರ್ಷಗಳ ಹಿಂದೆ ಚುನಾವಣೆ ಘೋಷಣೆಯಾಗಲು ದಿನಗಣನೆ ಆರಂಭ ವಾಗಿದ್ದಾಗ ತರಾತುರಿಯಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವುದಾಗಿ ಗ್ರಾ.ಪಂ. ಇಲ್ಲಿನ ಮನೆಗಳಿಗೆ ಮೀಟರ್‌ ಬೋರ್ಡ್‌ ಅಳವಡಿಸಿತ್ತು. ಅದಕ್ಕಾಗಿ ಶುಲ್ಕವನ್ನೂ ಪಡೆದಿತ್ತು. ಆದರೆ ಮತ್ತೂಂದು ಚುನಾವಣೆ ಬಂದರೂ ಈವರೆಗೆ ವಿದ್ಯುತ್‌ ಸಂಪರ್ಕ ಒದಗಿಸಿಲ್ಲ. ಅಲ್ಲದೇ ತಾಲೂಕಿನ ಸಂಸೆ, ಎಳನೀರು, ಗುತ್ಯಡ್ಕ, ಬಾಂಜಾರುಮಲೆ, ಕುತ್ಲೂರು ಸಹಿತ 9 ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕೋರಿ ಜನರು ಸರಕಾರಕ್ಕೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಈ ಬಾರಿಯಾದರೂ ಈಡೇರಬೇಕೆಂಬುದು ಅವರ ಆಗ್ರಹ.

ತಾಲೂಕಿಗೆ ಹೊಂದಿಕೊಂಡು ಹಲವು ಪ್ರವಾಸಿ-ತೀರ್ಥ ಕ್ಷೇತ್ರಗಳಿವೆ. ತಾಲೂಕು ರಸ್ತೆಯೇ ಆಶ್ರಯ. ಆದರೆ ಇವುಗಳೊಂದಿಗೆ ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಹಾಗೂ ಚಿಕ್ಕಮಗಳೂರು ಸಂಪರ್ಕಿಸಲು ರೈಲ್ವೇ ಮಾರ್ಗ ನಿರ್ಮಿಸಬೇಕೆಂಬ ಬೇಡಿಕೆ ಹಲವು ದಶಕಗಳದ್ದು. ಇದು ಈಡೇರಿದರೆ ಧಾರ್ಮಿಕ ಪ್ರವಾಸೋದ್ಯಮ ಬೆಳೆಯು ವುದಲ್ಲದೇ, ಕ್ಷೇತ್ರಗಳಿಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ. ಜತೆಗೆ ಶಿರಾಡಿ, ಚಾರ್ಮಾಡಿ ಘಾಟಿ ರಸ್ತೆಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ಬೇಡಿಕೆಯೂ ಮಹತ್ವದ್ದಾಗಿದ್ದು ಈಡೇರಬೇಕಿದೆ.

ಪಶ್ಚಿಮ ಘಟ್ಟ ಸಹಿತ ಅರಣ್ಯದಂಚಿನಲ್ಲಿ ಬಹಳಷ್ಟು ಪ್ರದೇಶಗಳಲ್ಲಿ ಪ್ರತೀ ಬೇಸಗೆಯಲ್ಲಿ ಕಾಳ್ಗಿಚ್ಚು, ಬೆಂಕಿ ಅನಾ ಹುತಗಳು ಸಂಭವಿಸುತ್ತಲೇ ಇರುತ್ತವೆ. ತಾಲೂಕಿನ 81 ಗ್ರಾಮಗಳಿಗೆ ಸಂಬಂಧಿಸಿದಂತೆ ತಾಲೂಕು ಕೇಂದ್ರದಲ್ಲಿ ಅಗ್ನಿ ಶಾಮಕ ಠಾಣೆಯಿದೆ. ಆದರೆ ಆಧುನಿಕ ಸಲಕರಣೆಗಳಿಲ್ಲ. ಬೆಳ್ತಂಗಡಿಯಿಂದ ಶಿಶಿಲ ಸಹಿತ ಚಾರ್ಮಾಡಿ ಪರಿಸರಕ್ಕೆ ತೆರಳಲು 40 ಕಿ.ಮೀ. ಕ್ರಮಿಸಬೇಕು. ಹಾಗಾಗಿ ಧರ್ಮಸ್ಥಳದಲ್ಲಿ ಹೆಚ್ಚುವರಿ ಸುಸಜ್ಜಿತ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕು ಎಂಬುದು ಹಲವು ವರ್ಷಗಳ ಆಗ್ರಹ. ಈ ವರ್ಷವಂತೂ ಕಾಳ್ಗಿಚ್ಚಿನ ಉಪಟಳ ಹೆಚ್ಚಾಗಿದೆ.

Advertisement

ತಾಲೂಕಿನ 81 ಗ್ರಾಮಗಳಿಗೆ ಕೊಕ್ಕಡ, ಬೆಳ್ತಂಗಡಿ, ವೇಣೂರು ಮೂರೇ ಹೋಬಳಿಗಳಿವೆ. ಪ್ರಸಕ್ತ ಕೊಕ್ಕಡ ಹೋಬಳಿ 27 ಗ್ರಾಮಗಳನ್ನು ಒಳಗೊಂಡಿದೆ. ಹೋಬ ಳಿಯ ನಾಡಕಚೇರಿಯನ್ನು ಪುತ್ತಿಲ, ಪಾರೆಂಕಿ, ಕುಕ್ಕಳ, ಬಂದಾರು, ಮೊಗ್ರು, ಕಣಿಯೂರು, ಇಳಂತಿಲ, ತೆಕ್ಕಾರು, ಬಾರ್ಯ ಗ್ರಾಮಗಳ ಜನರು 45 ಕಿ.ಮೀ.ಗೂ ಅಧಿಕ ದೂರವನ್ನು ಸುತ್ತಿಬಳಸಿ ಕ್ರಮಿಸಬೇಕಿದೆ. ಸರ್ವರ್‌ ಸಮಸ್ಯೆ, ಉಪತಹಶೀಲ್ದಾರ್‌ ಅಲಭ್ಯದಂಥ ಸಮಸ್ಯೆ ಸರಿದೂಗಿಸಲು ಕಣಿಯೂರನ್ನು ಪ್ರತ್ಯೇಕ ಹೋಬಳಿಯಾಗಿಸಬೇಕೆಂಬ ಬೇಡಿಕೆಗೂ ಮನ್ನಣೆ ನೀಡಬೇಕಿದೆ.

ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕೆಂಬ ಬೇಡಿಕೆ ಇನ್ನೂ ಈಡೇರಿಲ್ಲ. ಪ್ರಸಕ್ತ ಎಂಡೋಪೀಡಿತ ಮಕ್ಕಳ ಉಪಚಾರಕ್ಕೆ ಉಜಿರೆ ಹಾಗೂ ಕೊಕ್ಕಡದಲ್ಲಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಆದರೆ ಎಂಡೋಪೀಡಿತ ಕುಟುಂಬಕ್ಕೆ ಶಾಶ್ವತ ಪುನರ್ವಸತಿ ಕಲ್ಪಿಸಲಾಗುವುದು ಎಂಬ ಬೇಡಿಕೆ ಇನ್ನಾದರೂ ಈಡೇರಬೇಕಿದೆ. ಈ ಭರವಸೆ ಅನುಷ್ಠಾನವಾದರೆ ಹಲವು ಸಂತ್ರಸ್ತರಿಗೆ ಅನುಕೂಲವಾಗಲಿದೆ.

~ ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next