Advertisement

‘ಉದಯವಾಣಿ’ವರದಿಗೆ ಮೆಚ್ಚುಗೆ

12:18 AM Jun 21, 2019 | Sriram |

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಈ ಹಿಂದೆ ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮಗಳ ಸ್ಥಿತಿಗತಿ ಕುರಿತು ವಾಸ್ತವ ಚಿತ್ರಣ ನೀಡುವ ನಿಟ್ಟಿನಲ್ಲಿ ‘ಉದಯವಾಣಿ’ ಗುರುವಾರ ಪ್ರಕಟಿಸಿದ ‘ಕುಮಾರಣ್ಣನ ಗ್ರಾಮ ಕನಸು’ ಸಮಗ್ರ ವರದಿಗೆ ಓದುಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ವರದಿಯ ಪುಟವನ್ನೇ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಮುಖ್ಯಮಂತ್ರಿಗಳಿಗೆ ಟ್ವೀಟ್‌ನಲ್ಲೇ ತಿವಿದಿದ್ದಾರೆ.

Advertisement

‘ಕುಮಾರಣ್ಣನ ಗ್ರಾಮ ಕನಸು’ ವರದಿಯ ಪುಟವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿರುವ ಸದಾನಂದಗೌಡ ಅವರು, ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಗ್ರಾಮ ವಾಸ್ತವ್ಯದ ಬಗ್ಗೆ ನಮ್ಮ ತಕರಾರಿಲ್ಲ. ನಿಮ್ಮ ಉದ್ದೇಶ ನಿಮ್ಮ ನಿರ್ಧಾರ. ದಯವಿಟ್ಟು ನಿಮ್ಮ ಗ್ರಾಮ ವಾಸ್ತವ್ಯ ಮುಂದುವರಿಸುವ ಮೊದಲು ನಿಮ್ಮಲ್ಲೊಂದು ಕಳಕಳಿಯ ಕೋರಿಕೆ. ಇಂದಿನ ‘ಉದಯವಾಣಿ’ ದಿನಪತ್ರಿಕೆಯ ಪುಟ ಸಂಖ್ಯೆ ಎರಡನ್ನು ಓದಿ. ದಶಕದ ಹಿಂದಿನ ಘಾಟು ಹೇಗಿದೆ ನೈಜವಾಗಿ ತಿಳಿದುಕೊಳ್ಳಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

‘ಸೂತಕದ ಮನೆಗೆ ಶೃಂಗಾರ ಮಾಡಿದ್ದರು’ ವರದಿಯನ್ನೂ ಪೋಸ್ಟ್‌ ಮಾಡಿರುವ ಸದಾನಂದಗೌಡರು, ‘ಮಾನ್ಯ ಮುಖ್ಯಮಂತ್ರಿಗಳು, ಈ ಬಾರಿ ಗ್ರಾಮ ವಾಸ್ತವ್ಯಕ್ಕೆ ಗ್ರಾಮದ ಮನೆ ಬದಲು ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಅಂತ ಈಗ ಅರ್ಥವಾಯಿತು. ಸುಳ್ಳು ಭರವಸೆ ಕೊಟ್ಟರೂ ಬಳಿಕ ಪ್ರಶ್ನೆ ಮಾಡುವವರು ಇರಲ್ಲ ಅನ್ನೋ ವಿಶ್ವಾಸ’ ಎಂದು ಕುಟುಕಿದ್ದಾರೆ.

‘ಮಾರುತಿ ಕುಟುಂಬಕ್ಕೆ ತಪ್ಪಿಲ್ಲ ಈಗಲೂ ಗುಳೆ’ ವರದಿ ಪೋಸ್ಟ್‌ ಮಾಡಿ, ‘ಮಾನ್ಯ ಮುಖ್ಯಮಂತ್ರಿಗಳೇ, ಸಾಧ್ಯವಾದರೆ ದಶಕದ ಹಿಂದೆ ನೀವು ಭೇಟಿ ನೀಡಿ ಅಭಯ ಹಸ್ತ (ಅಂಗೈಯಲ್ಲಿ ಅರಮನೆ) ತೋರಿದ್ದ ವಿಜಯಪುರ ಜಿಲ್ಲೆಯ ಈ ಗ್ರಾಮಕ್ಕೊಮ್ಮೆ ಭೇಟಿ ನೀಡಿ ನಿಮ್ಮ ಗ್ರಾಮ ವಾಸ್ತವ್ಯದ ವಾಸ್ತವ ತಿಳಿದುಕೊಳ್ಳಿ’ ಎಂದು ಸದಾನಂದಗೌಡರು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next