ಬೆಂಗಳೂರು: ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ನಿಜವಾದ ಹೀರೊಗಳಿಗೆ ಕನ್ನಡ ಚಿತ್ರರಂಗ, ಕ್ರೀಡಾರಂಗದ ಪ್ರಮುಖರು ಗೌರವ ಸಲ್ಲಿಸುವ “ಬದಲಾಗು ನೀನು, ಬದಲಾಯಿಸು ನೀನು’ ದೃಶ್ಯ ರೂಪಕಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಚಿವ ಡಾ.ಕೆ.ಸುಧಾಕರ್ ಮಾರ್ಗದರ್ಶನದಲ್ಲಿ ಈ ದೃಶ್ಯ ರೂಪಕ ಸಿದ್ಧಪಡಿಸಲಾಗಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ 24 ಗಂಟೆಗಳಲ್ಲಿ ಸುಮಾರು ನಾಲ್ಕು ಲಕ್ಷಕ್ಕೂ ಆಧಿಕ ಮಂದಿ ವೀಕ್ಷಿಸಿದ್ದಾರೆ. ಅಂತೆಯೇ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂನಲ್ಲಿಯೂ ಲಕ್ಷಾಂತರ ಮಂದಿ ವೀಕ್ಷಿಸಿ ಲೈಕ್, ಶೇರ್ ಮಾಡಿದ್ದಾರೆ.
10 ನಿಮಿಷದ ವಿಡಿಯೋ ಇದಾಗಿದ್ದು, ಪವನ್ ಒಡೆಯರ್ ನಿರ್ದೇಶಿಸಿದ್ದಾರೆ. ಜಗತ್ತನ್ನು ಕಾಡುತ್ತಿರುವ ಕೋವಿಡ್ 19ದಿಂದ ಜನರನ್ನು ರಕ್ಷಿಸುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ವಿಜ್ಞಾನಿಗಳು, ರೈತರು, ಪೌರ ಕಾರ್ಮಿಕರು, ಮಾಧ್ಯಮ ವರದಿಗಾರರನ್ನು ಸೇರಿದಂತೆ ಅನೇಕರನ್ನು ಸ್ಮರಿಸಿಸಲಾಗಿದೆ. ಖ್ಯಾತ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಕನ್ನಡ ಚಿತ್ರರಂಗದ ಖ್ಯಾತ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ರವಿಚಂದ್ರನ್, ಉಪೇಂದ್ರ, ದರ್ಶನ್, ರಮೇಶ್ ಅರವಿಂದ್, ಸುಮಲತಾ ಅಂಬರೀಶ್, ಯಶ್, ಗಣೇಶ್, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ, ರವಿ ಶಂಕರ್ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ.
ವಿಶೇಷವೆಂದರೆ ಈ ಕ್ರೀಡಾಪಟು ಮತ್ತು ನಟರು ತಮ್ಮನ್ನು ಜನ ಗುರುತಿಸಿ ಕರೆಯುವ “ಶೀರ್ಷಿಕೆ’ಗಳನ್ನು ಕೋವಿಡ್ ಹೋರಾಟದಲ್ಲಿರುವ ನಿರತರಾಗಿರುವವರಿಗೆ ಅರ್ಪಿಸಿ ಅವರು “ನಮ್ಮ ಹೀರೊ’ ಎಂದಿದ್ದಾರೆ. ಜತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ದನಿಗೂಡಿಸಿದ್ದಾರೆ. ಮುಖ್ಯವಾಗಿ ಸಾರ್ವಜನಿಕರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ನಿರ್ವಹಿಸಬೇಕಾದ ಜವಾಬ್ದಾರಿಗಳು, ಎಚ್ಚರ ತಪ್ಪಿದರೆ ಆಗುವ ಅನಾಹುತಗಳನ್ನು ನಟರು ವಿಶಿಷ್ಟ ಡೈಲಾಗ್‌ಗಳ ಮೂಲಕ ಹೇಳಿದ್ದಾರೆ. ಈ ಡೈಲಾಗ್‌ಗಳನ್ನು ಸಾವಿರಾರು ಅಭಿಮಾನಿಗಳು ವಾಟ್ಸ್‌ಆ್ಯಪ್ ಸ್ಟೇಟಸ್‌ಗಳಿಗೆ ಅಪ್‌ಲೋಡ್ ಮಾಡಿದ್ದಾರೆ.
ಸಿಎಂ ಲೋಕಾರ್ಪಣೆ: ಈ ದೃಶ್ಯ ರೂಪಕವನ್ನು ಶುಕ್ರವಾರ ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಲೋಕಾರ್ಪಣೆಗೊಳಿಸಿದರು. ಈ ವೇಳೆ ಅದನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ವಾರಂಟೈನ್ ವೇಳೆ ಪರಿಕಲ್ಪನೆ ಮೂಡಿತು: ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಕೋವಿಡ್ 19 ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ವಿನೂತನ ಪ್ರಯತ್ನವಾಗಿ ದೃಶ್ಯ ರೂಪಕ ರೂಪಿಸಿದೆ. ನಾನು ಸ್ವಯಂ ಕ್ವಾರೆಂಟೈನ್‌ನಲ್ಲಿದ್ದ ವೇಳೆ ಸರ್ಕಾರ ಕೈಗೊಳ್ಳುವ ಮುನ್ನೆಚ್ಚರಿಕೆ ಕ್ರಮಗಳ ಜತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವೂ ಆಗಬೇಕೆಂಬ ಚಿಂತನೆ ಮನದಲ್ಲಿ ಮೂಡಿತು. ಅದರಂತೆ ದೃಶ್ಯ ರೂಪಕ ರೂಪುಗೊಂಡಿದ್ದು, ಕೋವಿಡ್ 19 ಕುರಿತಂತೆ ಹಲವು ಉಪಯುಕ್ತ ಸಲಹೆಗಳನ್ನು ಖ್ಯಾತನಾಮರು ನೀಡಿದ್ದಾರೆ. ಚಲನಚಿತ್ರ ಕಲಾವಿದರು, ಸಂಗೀತ ನಿರ್ದೇಶಕರು, ಕ್ರೀಡಾಪಟುಗಳು ಇದಕ್ಕೆ ದನಿಯಾಗಿದ್ದಾರೆ. ಇದಕ್ಕಾಗಿ ಸರ್ಕಾರದ ಪರವಾಗಿ ಅವರಿಗೆ ಧನ್ಯವಾದ ತಿಳಿಸಿದರು.
ಚಿತ್ರನಟ ಸುದೀಪ್ ಅವರನ್ನು ದೃಶ್ಯ ರೂಪ ಕಕ್ಕೆ ಜತೆಗೂಡಲು ಸಂಪರ್ಕಿಸಲು ಯತ್ನಿಸಿ ದೆವು. ಆದರೆ, ಅವರ ಸಂಪರ್ಕ ಲಭ್ಯವಾಗಲಿಲ್ಲ.
-ಡಾ.ಕೆ.ಸುಧಾಕರ್, ಆರೋಗ್ಯ ಸಚಿವ