ರಾಯಚೂರು : ರಾಜ್ಯ ಇಂಧನ ಇಲಾಖೆಯಿಂದ 2 ಸಾವಿರ ಲೈನ್‌ಮನ್‌ಗಳ ನೇಮಕಕ್ಕೆ 15 ದಿನಗಳಲ್ಲಿ ಅ ಧಿಸೂಚನೆ ಹೊರಡಿಸುವುದಾಗಿ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಏಕಕಾಲಕ್ಕೆ ಲೈನ್‌ಮನ್‌ಗಳ ನೇಮಕ ಪ್ರಕ್ರಿಯೆ ನಡೆಸಲಿದ್ದು, ಪಾರದರ್ಶಕತೆಗೆ ಒತ್ತು ನೀಡಲಾಗುವುದು. ಈಗಾಗಲೇ 1000 ಎಇ, ಜೆಇ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿದಿದ್ದು, ನೇಮಕಾತಿ ಆದೇಶ ನೀಡಲಾಗುತ್ತಿದೆ.
ವೈಟಿಪಿಎಸ್ ಹುದ್ದೆಗಳ ಭರ್ತಿ ಮಾಡುವಾಗ ಸ್ಥಳೀಯರಿಗೆ ಆದ್ಯತೆ ನೀಡಬೇಕು. 371(ಜೆ) ಅನ್ವಯ ಮೀಸಲಾತಿ ನೀಡಬೇಕಿದೆ. ನುರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸ್ಥಳೀಯರ ನೇಮಕಾತಿ ನಡೆಯುತ್ತಿಲ್ಲ. ಹೀಗಾಗಿ ಕೆಪಿಸಿಎಲ್‌ನಿಂದಲೇ ಅಗತ್ಯ ತರಬೇತಿ ಕೊಡಿಸಲು ಕ್ರಮ ವಹಿಸಲಾಗುವುದು ಎಂದರು.
ಸರ್ಕಾರಕ್ಕೆ ಮುಜುಗರ ಆಗಿಲ್ಲ: ಜಾರ್ಜ್
ವಾಲ್ಮೀಕಿ ನಿಗಮದ ಹಗರಣದ ತನಿಖೆ ವಿಚಾರವನ್ನು ಗೃಹ ಸಚಿವರಿಗೆ ಕೇಳಬೇಕು. ಈ ಪ್ರಕರಣದಿಂದ ನಮ್ಮ ಸರ್ಕಾರಕ್ಕೆ ಯಾವುದೇ ರೀತಿಯ ಮುಜುಗರ ಆಗಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ವಾಲ್ಮೀಕಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ತಪ್ಪಿತಸ್ಥರು ಎಂದು ನಾವು-ನೀವು ಕುಳಿತು ತೀರ್ಮಾನಿಸಲು ಸಾಧ್ಯವೇ? ಎಸ್‌ಐಟಿ ತನಿಖೆ ನಡೆಸುತ್ತಿದೆ. ಚಾರ್ಜ್‌ಶೀಟ್ ಹಾಕಿದ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ. ಹಿಂದೆ ನಾನು ಗೃಹ ಸಚಿವನಾಗಿದ್ದಾಗಲೂ ಆರೋಪ ಎದುರಿಸಿದ್ದೆ. ಆದರೆ ಕೊನೆಗೆ ಫಲಿತಾಂಶ ನನ್ನ ಪರವಾಗಿಯೇ ಬಂತು ಎಂದರು.