Advertisement

ನೋಡಲ್ ಅಧಿಕಾರಿಗಳ ನೇಮಕ

05:22 PM May 14, 2019 | Suhan S |

ಲಿಂಗಸುಗೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡಕೊಳ್ಳಲು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಸಹಾಯಕ ಆಯುಕ್ತ ರಾಜಶೇಖರ ಡಂಬಳ ಹೇಳಿದರು.

Advertisement

ಸಹಾಯಕ ಆಯುಕ್ತರ ಕಚೇರಿಯಲ್ಲಿ ಸೋಮವಾರ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅರಿತು ಕೆಲಸ ಮಾಡುವ ಉದ್ದೇಶದಿಂದ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ನಿಯೋಜನೆಗೊಂಡ ಅಧಿಕಾರಿಗಳು ಗ್ರಾಮಗಳಲ್ಲಿ ತೆರೆದ ಬಾವಿ, ಕೊಳವೆಬಾವಿ, ಆರ್‌ಒ ಪ್ಲಾಂಟ್, ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವಸ್ತುಸ್ಥಿತಿ ಹಾಗೂ ನೀರಿನ ಸಮಸ್ಯೆಯ ನೈಜ ಚಿತ್ರಣವನ್ನು ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಈಗಾಗಲೇ ನೋಡಲ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಲಿಂಗಸುಗೂರು ತಾಲೂಕಿನಲ್ಲಿ 26 ಹಾಗೂ ಮಸ್ಕಿ ತಾಲೂಕಿನಲ್ಲಿ 31 ಗ್ರಾಮಗಳಲ್ಲಿ ಬಾಡಿಗೆ ಬೋರವೆಲ್ನಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಬೋರವೆಲ್ ಬಾಡಿಗೆ ಹಣ ಪಾವತಿಗೆ ಎರಡು ತಾಲೂಕುಗಳಿಗೆ 7.60 ಲಕ್ಷ ರೂ. ನೀಡಲಾಗಿದೆ. ಕಡ್ಡೋಣಿ, ನಿಲೋಗಲ್, ಜಕ್ಕೇರಮಡು ಹಾಗೂ ಸೋಂಪುರ ಗ್ರಾಮಗಳಿಗೆ ದಿನಕ್ಕೆ 15 ಟ್ರಿಪ್‌ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗಿದೆ. ಕುಡಿಯುವ ನೀರಿಗಾಗಿ ಅನುದಾನ ಕೊರತೆ ಇಲ್ಲ. ಈಗಾಗಲೇ ಮೂರು ಹಂತದಲ್ಲಿ 1.10 ಕೋಟಿ ರೂ. ಖರ್ಚು ಮಾಡಲಾಗಿದೆ. ವಿವಿಧ ಗ್ರಾಮಗಳಲ್ಲಿ ನೀರಿನ ಶುದ್ಧೀಕರಣ ಘಟಕಗಳಿಗೆ ಇನ್ನು ಮುಂದೆ ನಿರಂತರ ಜ್ಯೋತಿ ವಿದ್ಯುತ್‌ ಸಂಪರ್ಕ ಒದಗಿಸುವಂತೆ ಜೆಸ್ಕಾಂ ಎಇಇಗೆ ಸೂಚನೆ ನೀಡಿದ್ದೇನೆ ಎಂದರು.

ತಹಶೀಲ್ದಾರ್‌ ಚಂದ್ರಕಾಂತ ದ್ಯಾಂಪುರ, ಜಿಪಂ ಎಇಇ ಶ್ರೀಮಂತ ಮಿಣಜಗಿ, ಜೆಸ್ಕಾಂ ಎಇಇ ಬನ್ನಪ್ಪ ಕರಿಬಂಟನಾಳ, ಪಶು ಸಂಗೋಪನಾ ಇಲಾಖೆ ರಾಚಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next