Advertisement
ವಿಕಾಸಸೌಧದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ರಾಜ್ಯದಲ್ಲಿನ ಕಾರ್ಮಿಕರು ಮತ್ತು ಕಾರ್ಮಿಕ ಕುಟುಂಬಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಾರ್ಮಿಕರ ಸಮಸ್ಯೆಗಳಿಗೆ ಒಂದೇ ಬಾರಿಗೆ ಪರಿಹಾರ ಒದಗಿಸುವ ಸಲುವಾಗಿ ಕಾರ್ಮಿಕ ಅದಾಲತ್ ಯೋಜನೆ ಜಾರಿ ಮಾಡಲಾಗಿದೆ. ಹೀಗೆ ಜಾರಿ ಮಾಡಲಾಗಿರುವ ಯೋಜನೆ ಉದ್ದೇಶ ಯಶಸ್ವಿಗೊಳಿಸುವ ಸಲುವಾಗಿ ಅದಾಲತ್‌ಗಳ ಕಾರ್ಯವೈಖರಿಗೆ ಚುರುಕು ನೀಡುವ ಸಲುವಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದರು.
Related Articles
Advertisement
50 ಕಾರ್ಮಿಕ ಕಚೇರಿಗಳ ಆರಂಭ:ರಾಜ್ಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತಾಲ್ಲೂಕುಗಳೂ ಸೇರಿದಂತೆ 50 ತಾಲ್ಲೂಕುಗಳಲ್ಲಿ ಕಾರ್ಮಿಕ ಇಲಾಖೆ ಕಚೇರಿಗಳಿಲ್ಲ ಎಂದು ಹೇಳಿದ ಸಚಿವ ಶಿವರಾಂ ಹೆಬ್ಬಾರ್, ಈ ಐವತ್ತೂ ತಾಲ್ಲೂಕುಗಳಲ್ಲಿ ಕಾರ್ಮಿಕ ಇಲಾಖೆ ಕಚೇರಿಗಳನ್ನು ಆರಂಭಿಸಿ ಓರ್ವ ಅಧಿಕಾರಿಯನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ ಎಂದರು. ಕಾರ್ಮಿಕ ಇಲಾಖೆಯನ್ನು ಸರ್ವ ಸ್ಪರ್ಶಿ ಸರ್ವ ವ್ಯಾಪಿಯನ್ನಾಗಿಸಲಾಗುವುದು, ಕಾರ್ಮಿಕರ ಹಿತರಕ್ಷಣೆಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ವಿಚಾರದಲ್ಲಿ ಕಾರ್ಮಿಕ ಸಂಘಟನೆಗಳೊಂದಿಗೆ ಸತತ ಸಂಪರ್ಕ ಸಾಧಿಸಲಾಗಿದೆ. ಕಾರ್ಮಿಕ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ ನೀಡಲಾಗುತ್ತಿದೆ. ಕೆಎಎಸ್, ಐಎಎಸ್, ಐಐಟಿ, ಐಪಿಎಸ್ ಓದುವ ಕಾರ್ಮಿಕ ಮಕ್ಕಳಿಗೆ ಸಹಾಯಧನ ನೀಡುವ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದರು. ಪ್ರತಿ ಜಿಲ್ಲೆಯಲ್ಲಿ ಇಎಸ್‌ಐ ಆಸ್ಪತ್ರೆ:
ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಇಎಸ್‌ಐ ಆಸ್ಪತ್ರೆ ಆರಂಭಿಸುವ ಚಿಂತನೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಇದಕ್ಕಾಗಿ ಮುಂದಿನ ವಾರ ದಿಲ್ಲಿಗೆ ತೆರಳುವುದಾಗಿ ಅವರು ಪ್ರಕಟಿಸಿದರು. ಇಎಸ್‌ಐ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳಿದ್ದರೂ ಸಹ ವೈದ್ಯರು ಎಂ ಪ್ಯಾನೆಲ್ ಆಗಿರುವ ಆಸ್ಪತ್ರೆಗಳಿಗೆ ರೋಗಿಗಳನ್ನು ಸಾಗಾಕುತ್ತಿದ್ದಾರೆ. ಹೀಗೆ ಎಂಪ್ಯಾನಲ್ ಆಸ್ಪತ್ರೆಗೆ ಕಳುಹಿಸಲಾಗಿರುವ ರೋಗಿಗಳ ಬಿಲ್ ಅನ್ನು ಇಲಾಖೆಯೇ ನೀಡುತ್ತಿದೆ ಎಂದ ಸಚಿವರು, ಮುಂದಿನ ದಿನಗಳಲ್ಲಿ ಈ ಅವ್ಯವಸ್ಥೆಯನ್ನು ತಪ್ಪಿಸಿ ರಾಜ್ಯದಲ್ಲಿ ಇರುವ 180 ಚಿಕಿತ್ಸಾಲಯಗಳಲ್ಲಿಯೇ ಅಗತ್ಯ ಚಿಕಿತ್ಸೆ ಕೊಡಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕ್ರಮವಹಿಸಲಾಗುತ್ತಿದೆ ಎಂದ ಅವರು, ಈ ಸಂಬಂಧ ಸಹ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು. ಲಸಿಕಾ ಅಭಿಯಾನ:
ಕೋವಿಡ್ 19 ಜಾಗತಿಕ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಇಲಾಖೆ ವತಿಯಿಂದ ಕಾರ್ಮಿಕರಿಗೆ ಲಸಿಕೆ ಹಾಕಿಸುವ ಅಭಿಯಾನವನ್ನೂ ಸಹ ಆರಂಭಿಸಲಾಗಿದೆ ಎಂದು ತಿಳಿಸಿದ ಸಚಿವ ಹೆಬ್ಬಾರ್, ರಾಜ್ಯಾದ್ಯಂತ ಸುಪ್ರೀಂ ಕೋರ್ಟ್ ನ ಆದೇಶದಂತೆ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು. ಆಹಾರ ಕಿಟ್‌ಗಳ ವಿತರಣೆಯನ್ನು ಪಕ್ಷಾತೀತವಾಗಿ ಮಾಡಲಾಗಿದ್ದು, ಎಲ್ಲಿಯೂ ದೂರು ಬಾರದಂತೆ ಶ್ರಮಿಕರಿಗೆ ಆಹಾರ ಕಿಟ್ ತಲುಪಿಸಲಾಗಿದೆ ಎಂದರಲ್ಲದೆ, ಶ್ರಮ ಸಾಮರ್ಥ್ಯ ಯೋಜನೆಯಡಿ ಟೂಲ್ ಕಿಟ್‌ಗಳನ್ನೂ ಸಹ ನೀಡಲಾಗಿದೆ ಎಂದರು. ಬೆಂಗಳೂರಿನಲ್ಲಿ ನಡೆದ ಎಂ.ಎಅ. ಫುಡ್ ಇಂಡಸ್ಟ್ರೀಸ್ ನ ಅಪಘಾತದಲ್ಲಿ ದುರ್ಮರಣಕ್ಕೀಡಾದ ಕಾರ್ಮಿಕರ ಕುಟುಂಬಗಳಿಗೆ ಕಲ್ಯಾಣ ಮಂಡಳಿಯಿಂದ ತಲಾ ಮೂರು ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲಾಗಿದೆ ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಾರ್ಮಿಕ ಇಲಾಖೆ ಅಪರ ಪ್ರಧಾನ ಕಾರ್ಯದರ್ಶಿ ಕಲ್ಪನಾ, ಇಲಾಖೆ ಆಯುಕ್ತ ಮತ್ತು ಕಾರ್ಯದರ್ಶಿ ಅಕ್ರಂ ಪಾಷ ಸೇರಿದಂತೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.