Advertisement

ರಾಜ್ಯ ವನ್ಯಜೀವಿ ಮಂಡಳಿಗೆ ಸದಸ್ಯರ ನೇಮಕ: ಮೂಲ ಕಡತ ಹಾಜರುಪಡಿಸಲು ಹೈಕೋರ್ಟ್ ಸೂಚನೆ

09:31 PM Jan 21, 2021 | Team Udayavani |

ಬೆಂಗಳೂರು: ರಾಜ್ಯ ವನ್ಯಜೀವಿ ಮಂಡಳಿಗೆ ಸದಸ್ಯರನ್ನು ನೇಮಕ ಮಾಡಿದ ಮೂಲ ಕಡತ ಹಾಗೂ ನೇಮಕಾತಿ ಸಭೆಯ ನಡಾವಳಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಮಂಡಳಿ ರಚನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಹಾಗೂ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರನ್ನೂ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಪರಿಸರವಾದಿ ಪ್ರಮೋದ್‌ ವೆಂಕಟೇಶಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಈ ನಿರ್ದೇಶನ ನೀಡಿ, ವಿಚಾರಣೆಯನ್ನು ಮಾ.1ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಪ್ರತಿವಾದಿಗಳ ಪರ ವಕೀಲರು, ಅರ್ಜಿದಾರರು ಕೆಲವೇ ಸದಸ್ಯರನ್ನು ಗುರಿಯಾಗಿಟ್ಟುಕೊಂಡು ಅರ್ಜಿ ಸಲ್ಲಿಸಲಾಗಿದೆ, ಕೆಲವು ಸದಸ್ಯರ ಹೆಸರನ್ನು ಕೈಬಿಡಲಾಗಿದೆ. ಹಾಗಾಗಿ ಅರ್ಜಿದಾರರ ಉದ್ದೇಶದ ಬಗ್ಗೆ ಅನುಮಾನವಿದ್ದು, ಆ ಬಗ್ಗೆಯೂ ನ್ಯಾಯಾಲಯ ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಹೇಳಿದರು.

ಅದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲೆ ಅನು ಚೆಂಗಪ್ಪ, ಇಬ್ಬರು ಸದಸ್ಯರ ಹೆಸರನ್ನು ಪ್ರತಿವಾದಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಅದಕ್ಕೆ ಕಾರಣವೆಂದರೆ ಅವರು ಈ ಹಿಂದೆಯೂ ಮಂಡಳಿಯ ಸದಸ್ಯರಾಗಿದ್ದರು. ಒಂದು ವೇಳೆ ನ್ಯಾಯಾಲಯ ಸೂಚಿಸಿದರೆ ಅವರನ್ನೂ ಸಹ ಪ್ರತಿವಾದಿಗಳನ್ನಾಗಿ ಮಾಡಲಾಗುವುದು. ಆದರೆ ಮನವಿಯಲ್ಲಿ ಮಂಡಳಿ ರಚನೆ ಆದೇಶವನ್ನು ರದ್ದು ಮಾಡಲು ಕೋರಲಾಗಿದೆ ಎಂದರು.

ಇದನ್ನೂ ಓದಿ:ಹಕ್ಕಿ ಜ್ವರದ ಹಿನ್ನೆಲೆ: ಅರ್ಧ ಬೇಯಿಸಿದ ಮೊಟ್ಟೆ ತಿನ್ನಬೇಡಿ ಎಂದ ಆಹಾರ ಪ್ರಾಧಿಕಾರ

Advertisement

“ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಸೆಕ್ಷನ್‌ 6(1) ಅಡಿಯಲ್ಲಿ ಸಕಾರರ ವನ್ಯಜೀವಿ ಮಂಡಳಿ ರಚನೆ ಮಾಡಿದೆ. ನಿಯಮದಂತೆ ಪರಿಸರವಾದಿಗಳು, ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವವರು ಮತ್ತು ಪರಿಶಿಷ್ಟ ಪಂಗಡದವರು ಇಲ್ಲ. ಜ ತೆ ಗೆ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವವರನ್ನೂ ಸದಸ್ಯರನ್ನಾಗಿ ನೇಮಕ ಮಾಡಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ’ ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

“ದಿನೇಶ್‌ ಸಿಂಗ್ವಿ ಅವರನ್ನು ಸರ್ಕಾರ 2020ರ ಜ.18ರಂದು ಮಂಡಳಿ ಸದಸ್ಯರನ್ನಾಗಿ ನೇಮಿಸಿದೆ. ಅವರು ಗಣಿ ಮಾಲೀಕರಾಗಿದ್ದು, ಬೇಲೇಕೇರಿ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಅಕ್ರಮಗಳ ಆರೋಪವಿದ್ದರೂ ಸದಸ್ಯರನ್ನಾಗಿಯೇ ಮುಂದುವರಿಸಲಾಗುತ್ತಿದೆ. ಅಲ್ಲದೆ, ಅ.16ರಂದು ಹೊಸದಾಗಿ 10 ಮಂದಿ ಸದಸ್ಯರನ್ನು ನೇಮಿಸಿದ್ದು ಅವರಲ್ಲಿ ಬಿ.ಚೇತನ್‌ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಜೆಪಿ ಕಾರ್ಯಕರ್ತ. ಡಾ.ಎ.ಆರ್‌. ಸೋಮಶೇಖರ್‌ ವೈದ್ಯರು, ಅಲೋಕ್‌ ವಿಶ್ವನಾಥ್‌, ಶಾಸಕ ಎಸ್‌.ಆರ್‌. ವಿಶ್ವನಾಥ್‌ ಪುತ್ರ. ಜೆ.ಎಸ್‌. ನವೀನ್‌, ಕಂದಾಯ ಸಚಿವ ಆರ್‌. ಆಶೋಕ್‌ ಸಂಬಂಧಿ ಆಗಿದ್ದು, ಇವರ್ಯಾರಿಗೂ ವನ್ಯಜೀವಿಗಳ ಬಗ್ಗೆ ಜ್ಞಾನವಿಲ್ಲ. ಆದರೂ ನೇಮಕ ಮಾಡಲಾಗಿದೆ’ ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next