ಪಿರಿಯಾಪಟ್ಟಣ: ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ತಿಳಿಸಿದರು.
ತಾಲೂಕಿನ ಹುಣಸವಾಡಿ ಕಿರನಲ್ಲಿ ಹಾಗೂ ನೀಲಂಗಾಲ ಶೆಟ್ಟಹಳ್ಳಿ ಗ್ರಾಪಂ ಕಟ್ಟಡ ಉದ್ಘಾಟಿಸಿ ಮಾತನಾಡಿ, ಜು.6ಕ್ಕೆ ಗ್ರಾಪಂ ಸದಸ್ಯರ ಅಧಿಕಾರ ಮುಗಿಯಲಿದೆ. ಕೋವಿಡ್ 19 ಸಂಕಷ್ಟದಿಂದ ಇನ್ನು 6 ತಿಂಗಳವರೆಗೆ ಗ್ರಾಪಂ ಚುನಾವಣೆ ಮುಂದೂಡಲಾಗಿದೆ. ಅಲ್ಲಿವರೆಗೂ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲು ತೀರ್ಮಾನಿ ಸಲಾಗಿದೆ ಎಂದು ಹೇಳಿದರು.
ಹೊಸ ಸಾಲ: ಸಹಕಾರ ಬ್ಯಾಂಕುಗಳಿಂದ ಹೊಸ ಸಾಲ ನೀಡಲು ತೀರ್ಮಾನಿಸಲಾಗಿದೆ. ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳಿಗೆ ಹಾಗೂ ಪರಿಷಿಷ್ಟ ಜಾತಿ ಮತ್ತು ಪಂಗಡದವರಿಗೆ ಸಾಲ ನೀಡಲು ತೀರ್ಮಾನಿಸಲಾಗಿದೆ. ಅಲ್ಲದೇ ಆಶಾ ಕಾರ್ಯಕರ್ತೆಯರಿಗೆ ತಲಾ 10 ಸಾವಿರ ರೂ. ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದರು.
ಸಂಸದ ಪ್ರತಾಪಸಿಂಹ ಮಾತನಾಡಿ, ಎಲ್ಲಾ ಗ್ರಾಪಂಗಳಿಗೆ ಸ್ವಂತ ಕೇಂದ್ರ ಕಟ್ಟಡ ಹೊಂದಲು ಕೇಂದ್ರ ಸರ್ಕಾರದಿಂದ 18 ಲಕ್ಷ ಹಾಗೂ ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಅವಕಾಶ ನೀಡಲಾಗಿದೆ. ಗಾಂಧೀಜಿ ಕಂಡ ಗ್ರಾಮರಾಜ್ಯ ಕನಸು ನೆರವೇರಿಸಲು ಗ್ರಾಪಂಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಮಹದೇವ್, ಹುಣಸೂರು ಎಸಿ ವೀಣಾ, ತಹಶೀಲ್ದಾರ್ ಶ್ವೇತಾ, ತಾಪಂ ಇಒ ಶೃತಿ, ಜಿಪಂ ಸದಸ್ಯ ಜಯಕುಮಾರ್, ತಾಪಂ ಅಧ್ಯಕ್ಷೆ ನಿರೂಪಾ, ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ರಾಮು, ಈರಯ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಹೇಂದ್ರ, ತಾಲೂಕು ಘಟಕದ ಅಧ್ಯಕ್ಷ ಡಾ.ಪ್ರಕಾಶ್ ಬಾಬು ರಾವ್, ಗ್ರಾಪಂ ಅಧ್ಯಕ್ಷರಾದ ಕುಮಾರ್, ಸುಧಾ ಇತರರಿದ್ದರು.