ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಇಂದು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಎರಡೂ ಕ್ಷೇತ್ರಗಳ ಉಸ್ತುವಾರಿ ಪಟ್ಟಿಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಸ್ಥಾನ ಸಿಗದಿರುವುದು ಇದೀಗ ಗಮನ ಸೆಳೆಯುತ್ತಿದೆ.
ಸಿಂಧಗಿ ವಿಧಾನ ಸಭೆ ಕ್ಷೇತ್ರಕ್ಕೆ ಗೋವಿಂದ್ ಕಾರಜೋಳ, ವಿ.ಸೋಮಣ್ಣ, ಸಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ, ರಮೇಶ್ ಜಿಗಜಿಣಗಿ, ಬಸನಗೌಡ ಪಾಟೀಲ್ ಯತ್ನಾಳ, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್, ಎ.ಎಸ್. ಪಾಟೀಲ್ ನಡಹಳ್ಳಿ, ಪಿ.ರಾಜೀವ್, ಶ್ರೀಕಾಂತ್ ಕುಲಕರ್ಣಿ ಹಾಗೂ ಬಾಬುರಾವ್ ಚಿಂಚನಸೂರು ಅವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಮುರುಗೇಶ್ ನಿರಾಶಿ, ಜೆ.ಸಿ ಮಾಧುಸ್ವಾಮಿ, ಬಿ.ಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಶಿವಕುಮಾರ್ ಉದಾಸಿ, ಎನ್. ರವಿಕುಮಾರ್ , ಮಹೇಶ್ ಟೆಂಗಿನಕಾಯಿ, ಹಾಗೂ ರಾಜುಗೌಡ, ನೆಹರೂ ಓಲೇಕಾರ್, ಎಂ ಚಂದ್ರಪ್ಪ, ವಿರೂಪಕ್ಷಪ್ಪ ಬಳ್ಳಾರಿ ಹಾಗೂ ಅರುಣ್ ಕುಮಾರ್ ಗುತ್ತೂರು ಅವರಿಗೆ ಉಸ್ತುವಾರಿಯ ಹೊಣೆ ನೀಡಲಾಗಿದೆ.
ಇನ್ನು ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗೆ ಅಕ್ಟೋಬರ್ 1 ರಿಂದ ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 8 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 11 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 13 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 30 ರಂದು 2 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು ಮತ್ತು ಅಂದೇ ಫಲಿತಾಂಶ ಹೊರಬೀಳಲಿದೆ. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿತ್ತು. ಇನ್ನು ಎಂ.ಸಿ. ಮನಗೂಳಿ ನಿಧನದಿಂದಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರ ತೆರವಾಗಿತ್ತು. ಇದೀಗ ರಾಜ್ಯದ ಎರಡೂ ಕ್ಷೇತ್ರಗಳಿಗೆ ಉಪ ಚುನಾವಣೆಯ ದಿನಾಂಕವನ್ನು ಘೋಷಿಸಲಾಗಿದ್ದು, ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.