ಕೇಂದ್ರ ಚುನಾವಣ ಆಯೋಗದ ಮುಖ್ಯ ಆಯುಕ್ತರು ಮತ್ತು ಆಯುಕ್ತರ ನೇಮಕ ಸಂಬಂಧ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆಸಿದ್ದು, ಇದರಲ್ಲಿ ಹಲವಾರು ವಿಚಾರಗಳು ಪ್ರಸ್ತಾವ ವಾಗಿವೆ. ಇದರಲ್ಲಿ ಪ್ರಮುಖವಾದದ್ದು, ಇವರ ಆಯ್ಕೆ ಪ್ರಕ್ರಿಯೆ. ಸಂವಿಧಾನದಲ್ಲಿ ಇದುವರೆಗೆ ಚುನಾವಣ ಆಯುಕ್ತರನ್ನು ಹೇಗೆ ನೇಮಕ ಮಾಡಬೇಕು ಎಂಬುದನ್ನು ಪ್ರಸ್ತಾವಿಸಿಲ್ಲ. ಹೀಗಾಗಿ ಸ್ವಾತಂತ್ರಾéನಂತರದಲ್ಲಿ ಎಲ್ಲ ಸರಕಾರಗಳು ತಮಗೆ ಬೇಕಾದ ಹಾಗೆ ಚುನಾವಣ ಆಯುಕ್ತರನ್ನು ನೇಮಕ ಮಾಡಿಕೊಂಡು ಬಂದಿವೆ ಎಂಬ ಅಭಿಪ್ರಾಯಗಳೂ ವಿಚಾರಣೆ ವೇಳೆ ವ್ಯಕ್ತವಾಗಿವೆ.
ಕೇಂದ್ರ ಚುನಾವಣ ಆಯೋಗವು ಒಂದು ಸ್ವಾಯತ್ತ, ಸಾಂವಿಧಾನಿಕ ಸಂಸ್ಥೆ. ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಹೊಣೆಗಾರಿಕೆಯನ್ನು ಹೊಂದಿರುವ ಇದು, ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಇಂಥ ಸಂಸ್ಥೆಯು ಆಳುವ ಸರಕಾರದ ಪರವಾಗಿದೆ ಎಂಬ ಅಭಿಪ್ರಾಯ ಬಂದರೆ ಜನರಲ್ಲಿ ಇಡೀ ವ್ಯವಸ್ಥೆಯ ಮೇಲಿನ ವಿಶ್ವಾಸವೇ ಹೋಗಬಹುದು. ಇಂಥ ಸಂಸ್ಥೆಗಳು ಆದಷ್ಟು ಸ್ವತಂತ್ರವಾಗಿರಬೇಕು ಎಂಬುದು ಸುಪ್ರೀಂ ಕೋರ್ಟ್‌ನ ನಿಲುವು ಕೂಡ ಆಗಿದೆ.
ಈಗ ನಡೆಯುತ್ತಿರುವ ವಿಚಾರಣೆಯ ತಿರುಳು ಕೂಡ ಅದೇ ಆಗಿದೆ. ಅಂದರೆ ಚುನಾವಣ ಆಯುಕ್ತರ ನೇಮಕ ವ್ಯವಸ್ಥೆ ಕುರಿತಂತೆ ಸುಪ್ರೀಂ ಕೋರ್ಟ್ ಪರಿಶೀಲನೆ ನಡೆಸುತ್ತಿದೆ. ಸಿಬಿಐ, ಸಿವಿಸಿ ಸಹಿತ ಇತರ ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರನ್ನು ಪ್ರಧಾನಿ, ವಿಪಕ್ಷ ಅಥವಾ ವಿಪಕ್ಷಗಳಲ್ಲಿ ಅತೀ ಹೆಚ್ಚು ಸ್ಥಾನ ಪಡೆದ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿ ಆಯ್ಕೆ ಮಾಡುತ್ತದೆ. ಅದೇ ರೀತಿ ಚುನಾವಣ ಆಯೋಗದ ಆಯುಕ್ತರ ನೇಮಕಕ್ಕೆ ಇಂಥ ಒಂದು ವ್ಯವಸ್ಥಿತ ಸಮಿತಿ ಏಕಿಲ್ಲ ಎಂಬ ಬಗ್ಗೆ ಪ್ರಶ್ನಿಸಲಾಗಿದೆ. ಸದ್ಯ ಸುಪ್ರೀಂ ಕೋರ್ಟ್ ಕೂಡ ಕೇಂದ್ರ ಸರಕಾರಕ್ಕೆ ಇಂಥ ಪ್ರಶ್ನೆ ಕೇಳಿದೆ. ಸುಪ್ರೀಂ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಿ, ಈ ಮೂಲಕ ಏಕೆ ಆಯೋಗಕ್ಕೆ ಆಯುಕ್ತರನ್ನು ನೇಮಕ ಮಾಡಬಾರದು ಎಂದು ಪ್ರಶ್ನಿಸಿದೆ. ಇದಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿಲ್ಲ.
ಇತಿಹಾಸಕ್ಕೆ ಹೋದರೆ ಯಾವುದೇ ಪಕ್ಷಗಳೂ ಚುನಾವಣೆ ಆಯುಕ್ತರ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಂಡಿಲ್ಲ. 6 ವರ್ಷದ ಅಧಿಕಾರಾವಧಿ ಪೂರೈಸಿದ ಕೊನೆಯ ಆಯುಕ್ತ ಟಿ.ಎನ್.ಶೇಷನ್. ಅಂದರೆ 1996ರಿಂದ ಇಲ್ಲಿವರೆಗೆ ಬಹುತೇಕ ಆಯುಕ್ತರ ಅವಧಿ ಕೇವಲ 2 ವರ್ಷದ ಆಸುಪಾಸಲ್ಲಿದೆ. ಅಂದರೆ 1950ರಿಂದ 1996ರ ವರೆಗೆ ದೇಶದಲ್ಲಿ 10 ಸಿಇಸಿಗಳು ಇದ್ದರೆ 1996ರಿಂದ ಇಲ್ಲಿವರೆಗೆ 15 ಮಂದಿ ಸಿಇಸಿಗಳನ್ನು ನೇಮಕ ಮಾಡಲಾಗಿದೆ. ಯುಪಿಎ ಸರಕಾರದ 10 ವರ್ಷಅವಧಿಯಲ್ಲಿ 6, ಎನ್‌ಡಿಎ ಅವಧಿಯಲ್ಲಿ 8 ಮಂದಿ ಸಿಇಸಿಗಳ ನೇಮಕವಾಗಿದೆ. ಈಗ ಪ್ರತಿವಾದಿ ನ್ಯಾಯವಾದಿಗಳು ಕೇಳುತ್ತಿರುವ ಪ್ರಶ್ನೆಯೂ ಇದೇ ಆಗಿದೆ.
6 ವರ್ಷಗಳ ಪೂರ್ಣಾವಧಿ ಪೂರೈಸುವಂಥವರನ್ನು ಏಕೆ ಸಿಇಸಿಗೆ ನೇಮಕ ಮಾಡುತ್ತಿಲ್ಲ? ಅಲ್ಪ ಅವಧಿಗೆ ಏಕೆ ಸಿಇಸಿಗಳನ್ನು ನೇಮಕ ಮಾಡಲಾಗುತ್ತಿದೆ? ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತಿಲ್ಲ. ಕೇಂದ್ರದ ಪ್ರಕಾರ, ಅಧಿಕಾರಿಗಳ ಮಟ್ಟದಲ್ಲಿ ಹಿರಿಯರನ್ನು ನೋಡಿ ಈ ಸ್ಥಾನಕ್ಕೆ ಆರಿಸುತ್ತಿದ್ದೇವೆ. ಹೀಗಾಗಿ ಅರ್ಹರು ಸಿಗುತ್ತಿಲ್ಲ ಎಂದು ಹೇಳಿದೆ. ಏನೇ ಆಗಲಿ, ಚುನಾವಣ ಆಯುಕ್ತರ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿರಬೇಕು ಎಂಬುದು ಎಲ್ಲರ ಅಭಿಪ್ರಾಯ.