Advertisement

ಗುಂಡಿ ಪರಿಹಾರಕ್ಕೆ ಕಮಿಷನರ್‌ ನೇಮಕ

12:40 AM Feb 03, 2020 | Lakshmi GovindaRaj |

ಬೆಂಗಳೂರು: ನಗರದ ರಸ್ತೆ ಗುಂಡಿಗಳಿಂದ ಅಪಘಾತಕ್ಕೆ ಒಳಗಾಗುವ ಸಾರ್ವಜನಿಕರಿಗೆ ಪರಿಹಾರ ನೀಡಲು (ಅರ್ಜಿ ವಿಲೇವಾರಿಗೆ) ನಿವೃತ್ತ ನ್ಯಾಯಾಧೀಶರೊಬ್ಬರನ್ನು (ಕ್ಲೇಮ್‌) ಕಮಿಷನರ್‌ ಆಗಿ ನೇಮಿಸಲು ಪಾಲಿಕೆ ಸಿದ್ಧತೆ ಮಾಡಿಕೊಂಡಿದೆ. ರಸ್ತೆ ಹಾಗೂ ಪಾದಚಾರಿ ಮಾರ್ಗಗಳ ಅಸರ್ಮಪಕ ನಿರ್ವಹಣೆಯಿಂದ ಉಂಟಾಗುವ ಅಪಘಾತದಲ್ಲಿ ಸಾರ್ವಜನಿಕರಿಗೆ ನಷ್ಟವುಂಟಾದರೆ, ಪರಿಹಾರ ನೀಡಲು ಪಾಲಿಕೆ ನಿರ್ಧರಿಸಿದೆ.

Advertisement

ಹೈಕೋರ್ಟ್‌ ನಿರಂತರವಾಗಿ ಚಾಟಿ ಬೀಸಿದ ಮೇಲೆ ಎಚ್ಚೆತ್ತುಕೊಂಡಿರುವ ಪಾಲಿಕೆ ನಿವೃತ್ತ ನ್ಯಾಯಾಧೀ ಶರನ್ನು ನೇಮಕ ಮಾಡಿಕೊಂಡು ಹೈಕೋರ್ಟ್‌ ಆದೇಶ ಪಾಲನೆ ಮಾಡಲು ತೀರ್ಮಾನಿಸಿದೆ. ನಗರದಲ್ಲಿ ರಸ್ತೆ ಗುಂಡಿಗಳ ದುಸ್ಥಿತಿಗೆ ಸಂಬಂಧಿಸಿದಂತೆ ಕೋರಮಂಗಲದ ವಿಜಯ್‌ ಮೆನನ್‌ 2015ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ರಸ್ತೆ ಗುಂಡಿಗಳ ಬಗ್ಗೆ ಹಾಗೂ ಅಸರ್ಮಪಕ ರಸ್ತೆಗಳಿಂದ ಅಪಘಾತ ಉಂಟಾದರೆ ಅವರಿಗೆ ಪರಿಹಾರ ನೀಡುವ ಬಗ್ಗೆ ಹೈಕೋರ್ಟ್‌ ಪಾಲಿಕೆಗೆ ನಿರಂತರವಾಗಿ ಎಚ್ಚರಿಕೆ ನೀಡುತ್ತಲ್ಲೇ ಇದೆ.

ಈ ಮಧ್ಯೆ ರಸ್ತೆ ಗುಂಡಿಗಳ ಅಪಘಾತಗಳಿಂದ ಗಾಯಗೊಂಡವರಿಗೆ ಪರಿಹಾರ ನೀಡಲು ಆರಂಭಿಸಿದರೆ, ಬೇರೆ ಪರಿಣಾಮಗಳು ಉಂಟಾಗಬಹುದು. ಪರಿಹಾರಕ್ಕೆ ಎಲ್ಲರೂ ಅರ್ಜಿ ಸಲ್ಲಿಸಲು ಪ್ರಾರಂಭಿಸುತ್ತಾರೆ ಎಂದು ಬಿಬಿಎಂಪಿ ಆಯುಕ್ತರು ಸಲ್ಲಿಸಿದ್ದ ಪ್ರಮಾಣಪತ್ರಕ್ಕೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ, ನಗರದಲ್ಲಿನ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡುವ ತಾನು ನೀಡಿದ ಆದೇಶ ಪಾಲಿಸುವ ಬದಲು,

ರಾಜಕಾರಣಿಗಳ ಜೊತೆಗೆ ಸಭೆ ನಡೆಸಿದ್ದು, ಈ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಂಡ ಬಿಬಿಎಂಪಿ ಆಯುಕ್ತರಿಗೆ ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಕೋರ್ಟ್‌ ನಿರ್ದೇಶನ ಪಾಲಿಸದೆ ಸಭೆ ನಡೆಸಿದ ಆರೋಪದ ಮೇಲೆ ನಿಮ್ಮ ಮೇಲೆ ನ್ಯಾಯಂಗ ನಿಂದನೆ ಕ್ರಮ ಏಕೆ ಜರುಗಿಸಬಾರದು ಎಂದೂ ಸಹ ಕೋರ್ಟ್‌ ಪ್ರಶ್ನೆ ಮಾಡಿತ್ತು.

ಅರ್ಜಿ ಮಾದರಿ ಸಿದ್ಧತೆ: ರಸ್ತೆ ಗುಂಡಿ ಹಾಗೂ ಪಾದಚಾರಿ ಮಾರ್ಗ ಅಸರ್ಮಪಕವಾಗಿದ್ದು ಇದರಿಂದ ಅಪಘಾತ ಉಂಟಾದರೆ ಪರಿಹಾರಕ್ಕೆ ಅರ್ಜಿ ನಮೂನೆ ಸಿದ್ಧಪಡಿಸುವ ನಿಟ್ಟಿನಲ್ಲೂ ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ, ಈ ಪ್ರಕ್ರಿಯೆ ಚುರುಕು ಪಡೆದುಕೊಂಡಿಲ್ಲ.

Advertisement

ಹೈಕೋರ್ಟ್‌ ತರಾಟೆ ತೆಗೆದುಕೊಂಡ ಮೇಲೆ ತರಾತುರಿಯಲ್ಲಿ ಪಾಲಿಕೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಯಾವ ಮಾಹಿತಿ ನೀಡಬೇಕು, ಯಾವ ದಾಖಲೆ ಸಲ್ಲಿಕೆ ಮಾಡಬೇಕು ಎನ್ನುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಅರ್ಜಿ ನಮೂನೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಅರ್ಜಿಗಳ ವಿಲೇವಾರಿಗೆ ನಿವೃತ್ತ ನ್ಯಾಯಮೂರ್ತಿ ಒಬ್ಬರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

“ನನ್ನ ಅರ್ಜಿಗೆ ಮಹಾನಗರ ಪಾಲಿಕೆ ಸ್ಪಂದಿಸಿರಲಿಲ್ಲ’: ಶಾಂತಿನಗರದ ಬರ್ಲಿ ಸ್ಟ್ರೀಟ್‌ನ ಅಸರ್ಮಪಕ ಪಾದಚಾರಿ ಮಾರ್ಗದಿಂದ 2019ರ ಅ.4ರಂದು ಅಪಘಾತಕ್ಕೆ ಒಳಗಾಗಿ ಬಲಗಾಲಿಗೆ ಗಾಯಮಾಡಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್‌ ಅವರು 85 ಸಾವಿರ ರೂ. ಪರಿಹಾರ ನೀಡುವಂತೆ ಪಾಲಿಕೆಗೆ ಮನವಿ ಸಲ್ಲಿಸಿದ್ದರು.

ಆದರೆ, ಈ ವಿಷಯ ಚರ್ಚೆಯಲ್ಲಿ ಇರುವ ಮಧ್ಯೆಯೇ ವಾರ್ಡ್‌ ಕಮಿಟಿ ಸದಸ್ಯ ಸ್ಥಾನದಿಂದಲೂ ಕಾತ್ಯಾಯಿನಿ ಚಾಮರಾಜ್‌ ಅವರನ್ನು ಕೈಬಿಡಲಾಗಿತ್ತು. “ಪರಿಹಾರ ನೀಡುವಂತೆ ಪಾಲಿಕೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಪಾಲಿಕೆ ಯಾವುದೇ ಪರಿಹಾರ ನೀಡಿಲ್ಲ. ಈ ಸಂಬಂಧ ಕೋರ್ಟ್‌ ಮೊರೆ ಹೋಗಿದ್ದು, ಇನ್ನೂ ಪ್ರಕರಣ ಅಂತಿಮವಾಗಿಲ್ಲ’ ಎಂದು ಕಾತ್ಯಾಯಿನಿ ಚಾಮರಾಜ್‌ ಅವರು ತಿಳಿಸಿದ್ದಾರೆ.

* ಹಿತೇಶ್‌ ವೈ.

Advertisement

Udayavani is now on Telegram. Click here to join our channel and stay updated with the latest news.

Next