ಶಿರ್ವ: ಕಂದಾಯ ಇಲಾಖೆಗೆ ಸಂಬಂಧಿಸಿದ ಕಚೇರಿಯ ಕಡತಗಳು ಈ ಹಿಂದಿಗಿಂತಲೂ ಜಾಸ್ತಿ ತನಿಖೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಓರ್ವ ಸಹಾಯಕ ಆಯುಕ್ತರ ಹುದ್ದೆಯನ್ನು ಸೃಷ್ಠಿ ಹಾಗೂ ನೇಮಕಗೊಳ್ಳುವ ಅಗತ್ಯವಿದೆ ಎಂದು ಆಗಮ ಪಂಡಿತ ಕುತ್ಯಾರು ಕೇಂಜ ಶ್ರೀಧರ ತಂತ್ರಿ ಅವರು ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಅವಿಭಜಿಕ ದ.ಕ. ಜಿಲ್ಲೆ ಇರುವಾಗ ಇದ್ದ ಸಹಾಯಕ ಆಯುಕ್ತರ ಹುದ್ದೆ ಈಗಲೂ ಅಷ್ಟೇ ಇದೆ.ಉಡುಪಿ ಜಿಲ್ಲೆಯಲ್ಲಿ ಉಡುಪಿ,ಬ್ರಹ್ಮಾವರ,ಕಾಪು,ಕುಂದಾಪುರ,ಬೈಂದೂರು,ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳಾಗಿದ್ದು, ಹಿಂದೆ ಇದ್ದ 3 ತಹಶೀಲ್ದಾರರ ಬದಲಾಗಿ ತಾಲೂಕಿಗೊಂದರಂತೆ 7 ತಹಶೀಲ್ದಾರರನ್ನು ಸರಕಾರ ನೇಮಿಸಿದ್ದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಏಳು ತಾಲೂಕುಗಳಿಗೆ ಓರ್ವ ಕುಂದಾಪುರದಲ್ಲಿ ಸಹಾಯಕ ಆಯುಕ್ತರಾಗಿರುತ್ತಾರೆ.
ಇದನ್ನೂ ಓದಿ: “ಕಳ್ಳನ ಹೆಂಡತಿ ಯಾವತ್ತಿದ್ರೂ….” ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಸಿ.ಟಿ.ರವಿ ಕಿಡಿ
ಕಚೇರಿ ಸಂಬಂಧಿತ ಕೆಲಸಗಳಿಗೆ ಜಿಲ್ಲೆಯ ದಕ್ಷಿಣ ಭಾಗದ ಹೆಜಮಾಡಿ,ಪಡುಬಿದ್ರಿ,ಪೂರ್ವ ಭಾಗದ ಕಾರ್ಕಳ,ಹೆಬ್ರಿ ಪರಿಸರದ ಗ್ರಾಮಸ್ಥರು ಜಿಲ್ಲಾ ಕೇಂದ್ರ ಉಡುಪಿಯನ್ನು ದಾಟಿಕೊಂಡು ಉತ್ತರ ಭಾಗದ ಕುಂದಾಪುರಕ್ಕೆ ಸಹಾಯಕ ಆಯುಕ್ತರನ್ನು ಕಾಣಲು ಹೋಗಬೇಕಾಗಿದೆ.ಇಲ್ಲಿನ ನಾಗರಿಕರು ದೂರದ ಕುಂದಾಪುರಕ್ಕೆ ಹೋದಾಗ ಅಲ್ಲಿ ಸಹಾಯಕ ಆಯುಕ್ತರು ಕಾರ್ಯದೊತ್ತಡದಿಂದ ಕೇಂದ್ರಸ್ಥಾನದಲ್ಲಿ ಇರದೇ ಇದ್ದಾಗ ಸಾರ್ವಜನಿಕರು ಅನಾವಶ್ಯಕ ತೊಂದರೆ ಎದುರಿಸಬೇಕಾಗುತ್ತದೆ.
ಕುಂದಾಪುರದ ಸಹಾಯಕ ಆಯುಕ್ತರ ಕಾರ್ಯ ಕ್ಷೇತ್ರ ಮತ್ತು ಕಾರ್ಯಬಾಹುಳ್ಯದ ಒತ್ತಡದ ನಿವಾರಣೆ ಕಡಿಮೆಯಾಗಿ ಜನರಿಗೆ ಅನುಕೂಲತೆ ಹೆಚ್ಚಾಗಲು ಉಡುಪಿ ಜಿಲ್ಲಾ ಕೇಂದ್ರದಲ್ಲಿ ಇನ್ನೋರ್ವ ಸಹಾಯಕ ಆಯುಕ್ತರ ಹುದ್ದೆಯನ್ನು ನೇಮಕಗೊಳಿಸುವಂತೆ ರಾಜ್ಯ ಕಂದಾಯ ಸಚಿವರನ್ನು ಕೇಂಜ ಶ್ರೀಧರ ತಂತ್ರಿ ಆಗ್ರಹಿಸಿದ್ದಾರೆ.