ಬೆಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವದ ಹಿನ್ನೆಲೆ ಯಲ್ಲಿ ಪ್ರತೀ ತಿಂಗಳು ದೇಶದಾದ್ಯಂತ 75 ಸಾವಿರ ಉದ್ಯೋಗಿಗಳಿಗೆ ನೇಮಕ ಪತ್ರ ನೀಡಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು, ಗಣಿಗಾರಿಕೆ ಖಾತೆ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ.
ಅಂಚೆ ಇಲಾಖೆ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ, ಕಂದಾಯ, ರಕ್ಷಣೆ, ಆರ್ಥಿಕ, ಕಾರ್ಮಿಕ, ಎಚ್‌ಎಎಲ್, ಅಂಚೆ ಸಹಿತ ವಿವಿಧ ಇಲಾಖೆಯಲ್ಲಿ ಆಯ್ಕೆಯಾದ 28 ಮಂದಿಗೆ “ಉದ್ಯೋಗ ಪ್ರಮಾಣ ಪತ್ರ’ ವಿತರಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿ ನೇಮಕ ಪ್ರಕ್ರಿಯೆ ನಡೆದಿದೆ. ಮುಂದಿನ ವರ್ಷದ ಅಕ್ಟೋಬರ್ ತಿಂಗಳ ಒಳಗೆ ದೇಶಾದ್ಯಂತ 10 ಲಕ್ಷ ಮಂದಿಗೆ ಉದ್ಯೋಗ ನೇಮಕಾತಿ ಪತ್ರ ನೀಡಲಾಗುವುದು ಎಂದು ತಿಳಿಸಿದರು.
ಉದ್ಯೋಗ ವಿಚಾರದಲ್ಲಿ ಬಹಳಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪಹಾಸ್ಯ ಮಾಡಿದ್ದರು. ಅದಕ್ಕೆ ಈಗ ಉತ್ತರ ದೊರೆತಿದೆ. ಕರ್ನಾಟಕ ವ್ಯಾಪ್ತಿಯಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ನೀಡಲಾಗಿದೆ ಎಂದು ಹೇಳಿದರು.
ಸ್ವ ಉದ್ಯೋಗ ಕ್ಷೇತ್ರದಲ್ಲಿ ಕೇಂದ್ರ ಬಹುದೊಡ್ಡ ಹೆಜ್ಜೆಯಿರಿಸಿದೆ. ದೇಶದಲ್ಲಿ ಮುದ್ರಾ ಯೋಜನೆಯ ಮೂಲಕ ಬಂಡವಾಳ ಹೂಡುವವರ ಸಂಖ್ಯೆ ಅಧಿಕವಾಗುತ್ತಿದೆ. ಸ್ಟಾರ್ಟ್ ಅಪ್ ಸಂಖ್ಯೆ ಅಧಿಕವಾಗುತ್ತಿದೆ. ಮೂಲಭೂತ ಸೌಕರ್ಯ ಕಲ್ಪಿಸಲು ಕೂಡ ಅಧಿಕ ಸಂಖ್ಯೆಯಲ್ಲಿ ಹಣವನ್ನು ಹೂಡಿಕೆ ಮಾಡಲಾಗುತ್ತಿದೆ ಎಂದರು.ಕೇಂದ್ರ ಸರಕಾರದ ಉದ್ಯೋಗ ಪತ್ರ ಪಡೆದವರು ಜನರಿಗೆ ತೊಂದರೆ ನೀಡದೆ ಜನ ಸೇವೆ ಮಾಡಿ ಎಂದು ಮನವಿ ಮಾಡಿದರು.
ಸಚಿವ ಡಾ| ಅಶ್ವತ್ಥನಾರಾಯಣ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಸೇರಿ ಮತ್ತಿತರರು ಉಪಸ್ಥಿತರಿದ್ದರು.