ಗದಗ: ರಾಜ್ಯಗಳ ಜನಸಂಖ್ಯೆ ಆಧಾರದಲ್ಲಿ ಸೇನಾ ನೇಮಕಾತಿ ನಡೆಸಲಾಗುತ್ತದೆ. ಸೇನೆಯಲ್ಲಿ ನೇಮಕಗೊಳ್ಳಲು ಓಟ ಹಾಗೂ ದೈಹಿಕ ಸದೃಢತೆ ಮುಖ್ಯವಾಗಲಿದ್ದು, ಆಸಕ್ತರು ನಿರಂತರ ಅಭ್ಯಾಸ ಮಾಡಬೇಕು. ಸದ್ಯ ಸೇನೆಯಲ್ಲಿ ಜನರಲ್ ಡ್ಯೂಟಿಗೆ ಸೇರ್ಪಡೆಗೊಂಡವರಿಗೆ ಕನಿಷ್ಠ 40 ಸಾವಿರ ರೂ. ಮಾಸಿಕ ಸಂಬಳ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಮಕ್ಕಳು ಭಾರತೀಯ ಸೇನೆಯಲ್ಲಿ ಭರ್ತಿಯಾಗಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಭೂ ಸೇನಾ ನೇಮಕಾತಿಯ ರಾಜ್ಯದ ಹೆಚ್ಚುವರಿ ಮಹಾನಿರ್ದೇಶಕ ಮೇಜರ್ ಜನರಲ್ ವಿಜಯ ಪಿಂಗಳೆ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದುಗಿನಲ್ಲಿ ಮೇ 28ರಿಂದ ಜೂನ್ 6ರ ವರೆಗೆ ರಾಜ್ಯದ 11 ಜಿಲ್ಲೆಗಳ ನೋಂದಾಯಿತ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಭಾಗದ ತರುಣರು ದೈಹಿಕ ಸಾಮರ್ಥ್ಯ ಹೊಂದಿದ್ದರೂ ಓಟ ಹಾಗೂ ಲಿಖೀತ ಪರೀಕ್ಷೆಗೆ ಪೂರ್ವ ಸಿದ್ಧತೆ ಇಲ್ಲದೇ ನೇಮಕಾತಿ ರ್ಯಾಲಿಯಲ್ಲಿ ಭರ್ತಿಯಾಗುತ್ತಿದ್ದಾರೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಪಾಲಕರೇ ಮಕ್ಕಳಿಗೆ ಸೇನೆಗೆ ಹೋಗುವುದು ಬೇಡ ಎನ್ನುವ ಕಾರಣಗಳಿಂದ ಕಡಿಮೆ ಸಂಖ್ಯೆಯಲ್ಲಿ ನೇಮಕಾತಿ ಆಗುತ್ತಿದೆ.
ಗದುಗಿನಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ದಿನವೂ 2,500 ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದ್ದು, ಅವರ ದೈಹಿಕ ಸಾಮರ್ಥ್ಯ ಆರೋಗ್ಯ ಹಾಗೂ ಲಿಖೀತ ಪರೀಕ್ಷೆಗಳ ಪೂರ್ವ ಸಿದ್ಧತೆ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿಲ್ಲ. ಇದನ್ನು ಅಭ್ಯರ್ಥಿಗಳು ಪಾಲಕರು ಗಮನಿಸಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುವಂತೆ ಪೂರ್ವ ಸಿದ್ಧತೆಗೆ ಮುಂದಾಗಬೇಕೆಂದು ತಿಳಿಸಿದರು. ಮುಂದಿನ ರ್ಯಾಲಿ ಕೊಪ್ಪಳದಲ್ಲಿ ನಡೆಸಲಾಗುವುದು ಎಂದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಸೇನಾ ನೇಮಕಾತಿ ಜರುಗಿಸಿ, ಈ ಭಾಗದ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಈ ಬಾರಿ ಗದುಗಿನಲ್ಲಿ ರ್ಯಾಲಿ ಆಯೋಜಿಸಿದೆ. ಗದಗ ಭೂ ಸೇನಾ ನೇಮಕಾತಿಗೆ 23,956 ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಾಯಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ನಿರ್ವಹಿಸಲು ಜಿಲ್ಲಾ ಕ್ರೀಡಾಂಗಣ, ಅಭ್ಯರ್ಥಿಗಳಿಗೆ ವಿವಿಧ ಸಮುದಾಯ ಭವನಗಳಲ್ಲಿ ವಸತಿ ಸೌಕರ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದ ಭೂಸೇನಾ ನೇಮಕಾತಿ ಮಹಾನಿರ್ದೇಶಕ ಬ್ರಿಗೇಡಿಯರ್ ದೀಪೇಂದ್ರ ರಾವತ್ ಮಾತನಾಡಿ, ಸೇನಾ ಭರ್ತಿ ರ್ಯಾಲಿ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ. ನೇಮಕಾತಿಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಅಭ್ಯರ್ಥಿಯ ಆಯ್ಕೆಗೆ ಅಗತ್ಯದ ಓಟ, ಹೈ ಜಂಪ್, ಲಾಂಗ್ ಜಂಪ್, ದೈಹಿಕ ಸಾಮರ್ಥ್ಯ, ದೈಹಿಕ ಅರ್ಹತೆ, ಲಿಖೀತ ಪರೀಕ್ಷೆ ಎದುರಿಸುವ ಕುರಿತು ಪೂರ್ವ ತಯಾರಿ ಮಾಡಿಕೊಳ್ಳಬೇಕು. ಇದಕ್ಕಾಗಿ ಭಾರತೀಯ ಸೇನೆ ವೆಬ್‌ಸೈಟ್‌ನಲ್ಲಿ ಅಗತ್ಯ ಮಾಹಿತಿ ನೀಡಲಾಗಿದೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳನ್ನು ಉತ್ತಮ ಪರಿಣಿತಿಯನ್ನು ಹೊಂದಬೇಕು. ಸೇನೆ ನೇಮಕಾತಿಗೆ ಯಾವುದೇ ವ್ಯಕ್ತಿಗೆ ಲಂಚ ನೀಡುವ ಅಗತ್ಯವಿಲ್ಲ. ಈ ಕುರಿತು ಅಭ್ಯರ್ಥಿಗಳಲ್ಲಿ ಜಾಗೃತರಾಗಬೇಕು ಎಂದು ಹೇಳಿದರು.
ಮಂಗಳೂರು ಭೂ ಸೇನಾ ನೇಮಕಾತಿ ಕೇಂದ್ರದ ನಿರ್ದೇಶಕ ಕರ್ನಲ್ ಎಂ.ಎ. ರಾಜಮನ್ನಾರ್, ಭೂ ಸೇನೆ ಅಧಿಕಾರಿಗಳಾದ ಪಿ. ರಂಗವಾಲ್, ರೋಹಿತ ಠಾಕೂರ, ರಿತೇಶ ಸಿಂಗ್, ಸಮೀತ ನವಾನಿ, ರಾಣೆ, ಹಾಗೂ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಧಾರವಾಡ ಕೇಂದ್ರದ ಉಪನಿರ್ದೇಶಕ ನಿವೃತ್ತ ವಿಂಗ್ ಕಮಾಂಡರ್ ಈಶ್ವರ ಕಡೊಳ್ಳಿ ಇದ್ದರು.