ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷರಾಗಿ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡುವಂತೆ ಜೆಡಿಎಸ್ ವರಿಷ್ಟರಿಗೆ ವಿಶ್ವನಾಥ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಡಗೊಂಡ ಆಡಳಿತ ಹಾಗೂ ಅಧಿಕಾರಿಗಳನ್ನು ಎಚ್ಚರಿಸಲು ಗ್ರಾಮವಾಸ್ತವ್ಯ ಸಹಕಾರಿ ಎಂದ ವಿಶ್ವನಾಥ್ , ಜನರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ಅದರ ಪರಿಹಾರಕ್ಕಾಗಿ ಸಿಎಂ ಮಾತ್ರವಲ್ಲ. ಜಿಲ್ಲಾಧಿಕಾರಿಗಳೂ ಗ್ರಾಮವಾಸ್ತವ್ಯ ಮಾಡಬೇಕು ಎಂದು ಸಲಹೆ ನೀಡಿದರು.
ದೇವರಾಜ್ ಅರಸ್ ಕಾಲದಲ್ಲಿ ಜನ ದೂರು ಹೇಳಿಕೊಂಡು ಬಂದಾಗ, ಇದು ಆಡಳಿತದ ವೈಫಲ್ಯ ಎಂದು ತಮಗೆ ಆಪ್ತರಾಗಿದ್ದ ಜಿಲ್ಲಾಧಿಕಾರಿಯನ್ನೇ ಎತ್ತಂಗಡಿ ಮಾಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ನೀಡುವ ಶಿಫಾರಸುಗಳನ್ನು ಅನುಷ್ಟಾನಗೊಳಿಸಲು ಪ್ರತ್ಯೇಕ ಹಣಕಾಸು ಸಚಿವರು ಇರಬೇಕು ಎಂಬ ಸಲಹೆ ನೀಡಿದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಗಳೇ ಹಣಕಾಸು ಖಾತೆ ಇಟ್ಟುಕೊಳ್ಳುವುದರಿಂದ ಈ ಕೆಲಸ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.