Advertisement

ಪ್ರತಿ ಗ್ರಾಮ ಪಂಚಾಯ್ತಿಗೆ ಪರಿಸರ ಅಧಿಕಾರಿ ನೇಮಿಸಿ

07:07 AM Jun 06, 2019 | Team Udayavani |

ಕೋಲಾರ: ವಿಷಮಯವಾಗುತ್ತಿರುವ ಜೀವ ಸಂಕುಲ ಉಳಿಯಬೇಕಾದರೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಪಂಚಾಯಿತಿಗೊಬ್ಬ ಪರಿಸರ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿ ಮನವಿ ಮಾಡಿದರು.

Advertisement

ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಮ್ಮ ತೋಟದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಅವರು, ಮನುಷ್ಯನ ದುರಾಸೆ ಮತ್ತು ಆಧುನೀಕತೆಗೆ ಮರುಳಾಗಿ ದಿನೇ ದಿನೆ ಪರಿಸರವನ್ನು ಹಾಳು ಮಾಡಿಕೊಳ್ಳುತ್ತಿದ್ದಾನೆ.

ಒಂದು ಕಡೆ ಸರ್ಕಾರಗಳು ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಪ್ರದೇಶಗಳನ್ನು ನಾಶ ಮಾಡುತ್ತಿದ್ದು, ಆಧುನಿಕತೆ ಹೆಚ್ಚಾದಂತೆ ಮರಗಿಡಗಳ ಸಂಖ್ಯೆ ದಿನೇದಿನೆ ಕಡಿಮೆ ಆಗಿ ಪರಿಸರ ಮಾಲಿನ್ಯಕ್ಕೆ ನೂರು ವರ್ಷ ಬದುಕುವ ಜೀವದ ಜೊತೆಗೆ ಇಡೀ ಜೀವಕುಲವೇ ಅವನತಿಯತ್ತ ಸಾಗುತ್ತಿದೆ ಎಂದು ಹೇಳಿದರು.

ಅನುದಾನ ದುರ್ಬಳಕೆ: ತಾಯಿ ಗರ್ಭದಲ್ಲಿಯೇ ಮಗುವಿನ ಮರಣ ಪ್ರಮಾಣ ಹೆಚ್ಚಾಗುವ ಜೊತೆಗೆ ಶುದ್ಧ ನೀರು, ಆಹಾರದ ಕೊರತೆ, ಪ್ರತಿಯೊಂದು ಸಕಲ ಜೀವರಾಶಿಗೆ ಅಮೂಲ್ಯವಾಗಿ ಬೇಕಾಗುವ ಶುದ್ಧ ಗಾಳಿಯ ಕೊರತೆ ಹೆಚ್ಚಾಗುತ್ತಿದೆ.

ನೆಪ ಮಾತ್ರಕ್ಕೆ ವರ್ಷಕ್ಕೆ ಒಂದು ಬಾರಿ ವಿಶ್ವ ಪರಿಸರ ದಿನಾಚರಣೆ ಆಚರಿಸುವ ಇಲಾಖೆ ಅಧಿಕಾರಿಗಳು, ಅನಂತರ ದಿನಗಳಲ್ಲಿ ಬರುವ ವಿವಿಧ ಅನುದಾನ ಸಮರ್ಪಕ ಜಾರಿ ಮಾಡದೇ ಸಕಲ ಜೀವ ರಾಶಿಗಳ ಮರಣ ಶಾಸನ ಬರೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ವಿಫ‌ಲ: ರೈತ ಮಹಿಳೆ ಸುನಿತಾ ಶ್ರೀನಿವಾಸಗೌಡ ಮಾತನಾಡಿ, ಸರ್ಕಾರದ ಯಾವುದೇ ಅನುದಾನವನ್ನು ಪಡೆಯಬೇಕಾದರೆ ಕನಿಷ್ಠ ಒಂದು ಕುಟುಂಬಕ್ಕೆ 10 ಸಸಿ ನೆಡುವ ಕಡ್ಡಾಯ ಆದೇಶ ಮಾಡಿದ್ದರೆ ಇಂದಿನ ಪರಿಸ್ಥಿತಿ ಬರುತ್ತಿರಲಿಲ್ಲ. ಅದೇ ರೀತಿ ಕೃಷಿ, ತೋಟಗಾರಿಕೆ. ರೇಷ್ಮೆ, ಹೈನುಗಾರಿಕಾ ಇಲಾಖೆಗಳಿಂದ ಜಾಗೃತಿ ಮೂಡಿಸಲು ಸಂಬಂಧಪಟ್ಟ ಅಧಿಕಾರಿಗಳು ವಿಫ‌ಲವಾಗಿದ್ದಾರೆ ಎಂದು ಹೇಳಿದರು.

ಸಾವಿರಾರು ಕೋಟಿ ಒಡೆಯನಾದರೂ ಗುಣಮಟ್ಟದ ಆಹಾರ ಹಾಗೂ ಶುದ್ಧ ಗಾಳಿ ಇಲ್ಲದ ಜೀವನ ನರಕಕ್ಕೆ ಸಮಾನ. ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಪರಿಸರ ಉಳಿಸಿ ಆರೋಗ್ಯವಂತ ಜೀವನ ರೂಪಿಸಬೇಕಾದರೆ ಜನ ಜಾಗೃತಿ ಮೂಡಿಸಲು ಪ್ರತಿ ಪಂಚಾಯಿತಿಗೊಬ್ಬ ಪರಿಸರ ಅಧಿಕಾರಿ ನೇಮಕ ಮಾಡಿ ಜನರಲ್ಲಿ ಕರಪತ್ರದ ಮುಖಾಂತರ ಜಾಗೃತಿ ಮೂಡಿಸಲು ಅವಕಾಶ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಉಮಾಗೌಡ, ರತ್ನಮ್ಮ, ಭಾಗ್ಯ, ಭಾರತಿ, ನಾಗಮ್ಮ, ರೋಜ, ಕಾವ್ಯ, ಲಕ್ಷಮ್ಮ, ಕರ್ಣ, ಸೃಷ್ಟಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next