ಚಿಂಚೋಳಿ: ಉದ್ಯೋಗ ಖಾತರಿ ಯೋಜನೆಗಾಗಿಯೇ ಒಬ್ಬ ಸಿಬ್ಬಂದಿ ನೇಮಿಸಿದರೆ ಎನ್‌ಎಂಆರ್ ಸಮಸ್ಯೆ ಪರಿಹಾರವಾಗುತ್ತದೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ ಹೇಳಿದರು. ತಾಲೂಕಿನ ಶಾದೀಪುರದಲ್ಲಿ ಅಖೀಲ ಭಾರತ ಜನವಾದಿ ಮಹಿಳಾ ಸಂಘಟನೆ, ಜಿಪಂ, ತಾಪಂ, ಪ್ರಜ್ಞಾ ಕಾನೂನು ಸಲಹಾ ಸಮಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜನಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಚಿಂಚೋಳಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿನಿಂದ ಸಂಘಟನೆಯಿಂದ ಮಹಾತ್ಮಗಾಂಧಿಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಸುಮಾರು 7000ಕ್ಕಿಂತ ಹೆಚ್ಚು ಫಾರ್ಮ ನಂ. 6 ಮತ್ತು 1ನ್ನು ಭರ್ತಿ ಮಾಡಿ ಗ್ರಾಪಂಗಳಿಗೆ ನೀಡಿ ಜಾಬ್ ಕಾರ್ಡ್ ಕೊಡಿಸಲಾಗಿದೆ.
ಗ್ರಾಪಂಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇದರಿಂದ ಎನ್‌ಎಂಆರ್ ತಯಾರಿಸಲು ವಿಳಂಬವಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಗಾಗಿಯೇ ಸಿಬ್ಬಂದಿ ನೇಮಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಎನ್‌ಎಂಆರ್ ತೆಗೆದ ನಂತರ ಆಯಾ ಗ್ರಾಪಂಗಳಲ್ಲಿ ಕೆಲಸ ಪ್ರಾರಂಭಿಸುವುದಕ್ಕಿಂತ ಮೊದಲು ಎನ್‌ಎಂಆರ್‌ನಲ್ಲಿರುವ ಕೂಲಿಕಾರರ ಹೆಸರು ತಿಳಿಸಿ ಅವರನ್ನು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.
ಕಾಯಕ ಬಂಧುಗಳಿಗೆ ತರಬೇತಿ ನೀಡಬೇಕು. ಪ್ರತಿ ಹಳ್ಳಿಗೆ ಒಬ್ಬ ಕ್ಷೇತ್ರ ಸಹಾಯಕರನ್ನು ನೇಮಿಸಬೇಕು ಎಂದು ಹೇಳಿದರು. ಚಿತ್ರನಟ ಚೇತನ ಮಾತನಾಡಿ, ಈಗ ಜಲಾನಯನ ವ್ಯವಸ್ಥೆಗಳನ್ನು ಪುನರುಜ್ಜೀವನಗೊಳಿಸುವ ಅವಶ್ಯಕತೆಯಿದೆ. ಮಳೆ ನೀರು ಶೇಖರಿಸಿಡಲು ಚೆಕ್ ಡ್ಯಾಂ, ಕೆರೆ, ಟ್ರೇಂಚೆಸ್, ಅರಣ್ಯೀಕರಣ ಕಾಮಗಾರಿ ಕೈಗೊಳ್ಳಬೇಕು.
ಯುವಕರು ಎಲ್ಲ ರಂಗಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಬೇಕು. ಹಿರಿಯರು ಇದಕ್ಕೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಒ ಹೆಪ್ಸಿರಾಣಿ ಕೋರ್ಲಪಾಟಿ, ತಾಲೂಕಿನ ಕುಂಚಾವರಂ ಗಡಿ ಪ್ರದೇಶದಲ್ಲಿ ನರೇಗಾ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.
ಕಾರ್ಮಿಕರಿಗೆ ಕೂಲಿ ಸಿಗುತ್ತಿದೆ. ಚಿಂಚೋಳಿ ತಾಲೂಕಿನ 36 ಗ್ರಾಪಂಗಳಲ್ಲಿ ಏಪ್ರಿಲ್ 1ರಿಂದ ಒಟ್ಟು 28ಸಾವಿರ ಮಾನವ ದಿನಗಳು ಸೃಷ್ಟಿಸಲಾಗಿದೆ. ಜನರು ಸರಕಾರದ ಯೋಜನೆ ಗ್ರಹಿಸಿ ಉಪಯೋಗಿಸಿಕೊಳ್ಳಬೇಕು. ಉದ್ಯೋಗ ನಿಮ್ಮ ಹಕ್ಕು ಆಗಿದೆ. ಯಾರಿಗೂ ಜಾಬ್ ಕಾರ್ಡ್ ಕೊಡಬಾರದು. ಯಾವುದೇ ಭ್ರಷ್ಟಾಚಾರ ಆಗದಂತೆ ಫಲಾನುಭವಿಗಳ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗಿದೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಮಾತನಾಡಿದರು. ತಾಪಂ ಅಧಿಧಿಕಾರಿ ಅನೀಲಕುಮಾರ ರಾಠೊಡ, ತಹಶೀಲ್ದಾರ ದಯಾನಂದ ಪಾಟೀಲ, ಅನಂತ ನಾಯಕ, ಗ್ರಾಪಂ ಅಧ್ಯಕ್ಷೆ ಪುಷ್ಪಾವತಿ ಪೂಜಾರಿ, ಪಿಡಿಒ ತುಕ್ಕಪ್ಪ, ನಂದಾದೇವಿ, ಸೌಭಾಗ್ಯಮ್ಮ ಮಠಪತಿ ಇದ್ದರು. ಪಿಡಿಒ ರಾಮಕೃಷ್ಣ ಸ್ವಾಗತಿಸಿದರು. ಡಾ| ಮೀನಾಕ್ಷಿ ಬಾಳಿ ನಿರೂಪಿಸಿದರು. ಭೀಮಾಶಂಕರ ವಂದಿಸಿದರು.