Advertisement

ಆನ್‌ ಲೈನ್‌ ಪ್ರವೇಶ: ಬೆರಳತುದಿಯಲ್ಲೇ ಪದವಿ ಶಿಕ್ಷಣಕ್ಕೆ ಅರ್ಜಿ ಅಲೆದಾಟ ತಪ್ಪಿಸಲು ಕ್ರಮ

01:52 AM Aug 02, 2020 | Hari Prasad |

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಪದವಿ ಕಾಲೇಜು ಪ್ರವೇಶಕ್ಕಾಗಿ ಕಾಲೇಜು ಅಲೆಯಬೇಕಾಗಿಲ್ಲ.

Advertisement

ಮನೆಯಿಂದ ಬೆರಳ ತುದಿಯಲ್ಲೇ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಕೋವಿಡ್ 19 ಹಿನ್ನೆಲೆಯಲ್ಲಿ ಮೊಬೈಲ್‌ ಮೂಲಕವೇ ತಮಗೆ ಬೇಕಾದ ಸರಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕಾಲೇಜು ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ.

ರಾಜ್ಯದ ಯಾವುದೇ ಸರಕಾರಿ ಕಾಲೇಜಿಗೆ ವಿದ್ಯಾರ್ಥಿ ಇರುವಲ್ಲಿಂದಲೇ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಪಡೆಯಬಹುದು. ಕಾಲೇಜು ಶಿಕ್ಷಣ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, 2020-21ನೇ ಸಾಲಿಗೆ ಅರ್ಜಿ ಸಲ್ಲಿಸಬಹುದಾದ ಲಿಂಕ್‌ ಲಭ್ಯವಾಗುತ್ತದೆ.

Advertisement

ವೆಬ್‌ಸೈಟ್‌ನ ಮುಖಪುಟದಲ್ಲಿ ಆನ್‌ಲೈನ್‌ ಸೇವೆಗಳು ಎಂಬ ಆಯ್ಕೆಯ ಕೆಳಗೆ ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಏಕೀಕೃತ ವೆಬ್‌ಸೈಟ್‌ ಮಾಹಿತಿ ಸಿಗುತ್ತದೆ.

ಅಲ್ಲಿಯೇ ಪಕ್ಕದಲ್ಲಿ 2020-21ನೇ ಪ್ರವೇಶ ಪ್ರಕ್ರಿಯೆಯ ಲಿಂಕ್‌ ಸಿಗಲಿದೆ. ಅದನ್ನು ಕ್ಲಿಕ್‌ ಮಾಡಿ ಪ್ರವೇಶ ಪ್ರಕ್ರಿಯೆ ಮುಂದುವರಿಸಬಹುದು.

ಆನ್‌ಲೈನ್‌ ಪ್ರವೇಶ ಹೇಗೆ?
ಇಲಾಖೆಯ https://dce.karnataka.gov.in ವೆಬ್‌ಸೈಟ್‌ನಲ್ಲಿ ಪ್ರಸಕ್ತ ಸಾಲಿನ ಆನ್‌ಲೈನ್‌ ಪ್ರಕ್ರಿಯೆಯ ಪ್ರತ್ಯೇಕ ಲಿಂಕ್‌ ಕಲ್ಪಿಸಲಾಗಿದೆ. ಇದನ್ನು ಕ್ಲಿಕ್ಕಿಸಿದರೆ ಹೊಸ ವಿಂಡೋ ತೆರೆದುಕೊಳ್ಳುತ್ತದೆ. ‘ಆನ್‌ಲೈನ್‌ ಪ್ರವೇಶ ಅರ್ಜಿಗಾಗಿ ಇಲ್ಲಿ ಕ್ಲಿಕ್‌ ಮಾಡಿ’ ಎಂಬ ಇನ್ನೊಂದು ಆಯ್ಕೆ ಸಿಗುತ್ತದೆ. ಅಲ್ಲಿ ಕ್ಲಿಕ್‌ ಮಾಡಿದ ಬಳಿಕ ವಿದ್ಯಾರ್ಥಿಯು ತನ್ನ ಮೊಬೈಲ್‌ ಸಂಖ್ಯೆಯನ್ನು ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಕೆ ಆರಂಭಿಸಬಹುದು.

ಒಟಿಪಿ ಬಂದ ಬಳಿಕ ಅಗತ್ಯವಿರುವ ದಾಖಲೆಗಳನ್ನು ಅದರ ಲ್ಲಿಯೇ ಭರ್ತಿ ಮಾಡಬಹುದು. ವಿದ್ಯಾರ್ಥಿ ಆಯ್ಕೆ ಮಾಡಿಕೊಳ್ಳುವ ಕಾಲೇಜಿಗೆ ಸಂಬಂಧಿಸಿದ ಎಲ್ಲ ವಿವರಗಳು ಮೊಬೈಲ್‌ನಲ್ಲೇ ಲಭ್ಯವಾಗುತ್ತವೆ. ಏಕಕಾಲಕ್ಕೆ 4ಕ್ಕೂ ಅಧಿಕ ಕಾಲೇಜುಗಳಿಗೆ ಅರ್ಜಿ ಸಲ್ಲಿಸಬಹುದು. ದಾಖಲಾತಿ ಪಡೆದ ಬಳಿಕ ಇತರ ಕಾಲೇಜಿನ ಅರ್ಜಿ ಡಿಲೀಟ್‌ ಆಗುತ್ತದೆ ಎಂದು ಇಲಾಖೆ ನಿರ್ದೇಶಕ ಪ್ರೊ| ಎಸ್‌. ಮಲ್ಲೇಶ್ವರಪ್ಪ ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ ಹೇಗೆ?
ಸರಕಾರಿ ಕಾಲೇಜಿಗೆ ಅರ್ಜಿ ಸಲ್ಲಿಸಿದ ಪ್ರತಿಯೋರ್ವರಿಗೂ ಸೀಟು ಲಭಿಸುತ್ತದೆ. ಒಂದೊಮ್ಮೆ ಆಯ್ದುಕೊಂಡಿರುವ ಕಾಂಬಿನೇಷನ್‌ನಲ್ಲಿ 15 ಅಥವಾ ಅದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾಗ ಮಾತ್ರ ಬೇರೆ ಕಾಂಬಿನೇ ಷನ್‌ ಪಡೆಯಲು ಸಲಹೆ ನೀಡಲಾಗುತ್ತದೆ. ದಾಖಲಾತಿ ಪ್ರಮಾಣ ಗರಿಷ್ಠ ಮಿತಿ ದಾಟಿದರೂ ಸರಕಾರದಿಂದ ಹೆಚ್ಚುವರಿ ಅನುಮತಿ ಕಲ್ಪಿಸಲಾಗುತ್ತದೆ. ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಆನ್‌ಲೈನ್‌ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದ್ದು ಮಾತ್ರವಲ್ಲದೆ, ಅತ್ಯಂತ ಸರಳಗೊಳಿಸಿದ್ದೇವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆಫ್ಲೈನ್‌ ಅವಕಾಶವೂ ಇದೆ
ಇಂಟರ್‌ನೆಟ್‌ ಅಥವಾ ಇನ್ಯಾವುದೇ ಕಾರಣಕ್ಕೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳು ಕಾಲೇಜಿಗೆ ಹೋಗಿ ಅರ್ಜಿ ಭರ್ತಿ ಮಾಡಿ, ಪ್ರವೇಶ ಪಡೆಯಬಹುದು. ಹೀಗೆ ಸ್ವೀಕರಿಸಿದ ಅರ್ಜಿಗಳ ವಿವರಗಳನ್ನು ಕಾಲೇಜಿ ನವರು ಕಾಲೇಜು ಲಾಗ್‌ಇನ್‌ ಮೂಲಕವೇ ಆನ್‌ಲೈನ್‌ ಅರ್ಜಿ ಟೆಂಪ್ಲೇಟ್‌ನಲ್ಲಿ ಭರ್ತಿ ಮಾಡಬೇಕು.

ವಾಟ್ಸ್‌ಆ್ಯಪ್‌ ಸಹಾಯವಾಣಿ
ಆನ್‌ಲೈನ್‌ ಪ್ರವೇಶಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾದಲ್ಲಿ ವಾಟ್ಸ್‌ಆ್ಯಪ್‌ನಲ್ಲಿ ನಿವೇದಿಸಿಕೊಂಡು, ಪರಿಹಾರ ಪಡೆಯಬಹುದು. ಹಾಗೆಯೇ ಇ-ಮೇಲ್‌ ಕೂಡ ಇದೆ.
ಸಹಾಯವಾಣಿ ವಾಟ್ಸ್‌ಆ್ಯಪ್‌ : 8277735113, 8277573373

ಸರಕಾರಿ ಕಾಲೇಜುಗಳ ಆನ್‌ಲೈನ್‌ ಪ್ರವೇಶ ಅರ್ಜಿ ಸಂಪೂರ್ಣ ಉಚಿತ. ಪ್ರಥಮ, ದ್ವಿತೀಯ ಮತ್ತು ತೃತೀಯ ಪದವಿ ಆನ್‌ಲೈನ್‌ ಪ್ರವೇಶ ಪ್ರಕ್ರಿಯೆಯನ್ನು ಈ ವರ್ಷ ಆರಂಭಿಸಿದ್ದೇವೆ. ಇಂಟರ್‌ನೆಟ್‌ ಸಮಸ್ಯೆ ಇದ್ದರೆ ಕಾಲೇಜಿಗೆ ಹೋಗಿಯೂ ದಾಖಲಾಗಬಹುದು.
– ಪ್ರೊ| ಎಸ್‌. ಮಲ್ಲೇಶ್ವರಪ್ಪ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ

ಇ-ಮೇಲ್‌: dceadmissions2020@gmail.com

Advertisement

Udayavani is now on Telegram. Click here to join our channel and stay updated with the latest news.

Next