Advertisement

ಲೋಪದೋಷ ಇದ್ದರೆ ಅರ್ಜಿ ಸಲ್ಲಿಸಿ

05:06 PM Mar 02, 2018 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಫೆ. 28, 2018 ಪ್ರಕಾರ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 9,61,894 ಮತದಾರರು
ನೋಂದಣಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಸಂಬಂಧ ಅಂತಿಮ ಮತದಾರರ ಪಟ್ಟಿ ಕುರಿತು ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 9,61,894 ಮತದಾರರ ಪೈಕಿ 4,81,459 ಪುರುಷ ಮತದಾರರು ಮತ್ತು 4,80,338 ಮಹಿಳಾ ಮತದಾರರು ಸೇರಿದ್ದಾರೆ ಎಂದು ಅವರು ತಿಳಿಸಿದರು.

ಪ್ರತಿ ಮತಗಟ್ಟೆಯ ಮತದಾರರ ಪಟ್ಟಿ ಸಿದ್ಧವಾಗಿದ್ದು, ಹೊಸದಾಗಿ ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು, ಅದೇ ಮತಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮುಂತಾದವುಗಳನ್ನು ಸೇರಿಸಲು ಇನ್ನೂ ಕಾಲಾವಕಾಶವಿದೆ. ರಾಜಕೀಯ ಪಕ್ಷಗಳು ಇವುಗಳನ್ನು ಪರಿಶೀಲಿಸಿ ಯಾವುದೇ ಲೋಪದೋಷಗಳು ಇದ್ದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.

ಆಯಾ ತಾಲೂಕು ತಹಶೀಲ್ದಾರ್‌ ಕಚೇರಿ, ಉಪ-ವಿಭಾಗ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ಮತದಾರರ ಪಟ್ಟಿ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದೆಂದು ಅವರು ಮಾಹಿತಿ ನೀಡಿದರು. ಯಾವುದೇ ಮತದಾರ ತನ್ನ ಎಪಿಕ್‌ ನಂಬರ್‌ ಮತ್ತು ಮೊಬೈಲ್‌ ನಂಬರ್‌ನ್ನು 9731979811 ಸಂಖ್ಯೆಗೆ ಎಸ್‌ಎಮ್‌ಎಸ್‌ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಸ್ಥಿತಿಗತಿ ತಿಳಿಯಬಹುದಾಗಿದೆ ಎಂದು ತಿಳಿಸಿದರು. 

Advertisement

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಸಿದ್ಧಗೊಂಡಿರುವ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತಗಟ್ಟೆಗಳು, ಮತದಾರರ ಪಟ್ಟಿ, ಮತಯಂತ್ರ, ಮತಪರಿಶೀಲನೆ ಯಂತ್ರ ಸೇರಿದಂತೆ ಮುಂತಾದವುಗಳ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್‌, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಹೊಸದಾಗಿ ಸೇರ್ಪಡೆಯಾದ 121 ಮತಗಟ್ಟೆಗಳು ಸೇರಿದಂತೆ ಒಟ್ಟು 1,127 ಮತಗಟ್ಟೆಗಳಿವೆ. ಆನ್‌ ಲೈನ್‌ಲ್ಲಿ ಮತದಾರರ ಪಟ್ಟಿಯ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದಲ್ಲದೆ, ಪ್ರತಿ ಮತಗಟ್ಟೆಗೆ ಬೂತ್‌ ಮಟ್ಟದ ಅಧಿಕಾರಿಗಳನ್ನು ನೇಮಿಸಿದ್ದು, ಇಲ್ಲಿ ಮತದಾರರ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಪ್ರತಿ ಬೂತ್‌ಗೆ ತಮ್ಮ ಏಜೆಂಟರನ್ನು ನೇಮಿಸಿಕೊಳ್ಳುವ ಮೂಲಕ ಮತದಾರರ ಪಟ್ಟಿಯನ್ನು ಸರಿಪಡಿಸಿಕೊಳ್ಳಬೇಕು.
 ಜೆ. ಮಂಜುನಾಥ, ಜಿಲ್ಲಾಧಿಕಾರಿ  

Advertisement

Udayavani is now on Telegram. Click here to join our channel and stay updated with the latest news.

Next