ವಾಷಿಂಗ್ಟನ್: ಈ ವರ್ಷದ ಅಂತ್ಯದವರೆಗೆ ಎಚ್- 1ಬಿ ವೀಸಾ ವಿತರಣೆ ಸ್ಥಗಿತಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರಡಿಸಿರುವ ಆದೇಶದ ವಿರುದ್ಧ 174 ಭಾರತೀಯರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೊಲಂಬಿಯಾ ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತು ಅರ್ಜಿ ಸಲ್ಲಿಸಲಾಗಿದೆ.
ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾಧೀಶ ಕೇತಂಬಿ ಬ್ರೌನ್ ಜಾಕ್ಸನ್, ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ, ಹೋಮ್‌ಲ್ಯಾಂಡ್ ಭದ್ರತಾ ವಿಭಾಗದ ಕಾರ್ಯದರ್ಶಿ ಚಾದ್ ಎಫ್ ವಾಲ್ಫ್ ಹಾಗೂ ಕಾರ್ಮಿಕ ಕಾರ್ಯದರ್ಶಿ ಯುಜೀನ್ ಸ್ಕಾಲಿಯಾ ಅವರಿಗೆ ಸಮನ್ಸ್ ಜಾರಿಗೊಳಿ ಸಿದ್ದಾರೆ. ಭಾರತೀಯರ ಪರ ವಾದ ಮಂಡಿಸಿದ ವಕೀಲ ವಾಸೆನ್ ಬನಿಯಾಸ್, ಎಚ್-1ಬಿ ಮತ್ತು ಎಚ್-4 ವೀಸಾಗಳ ಮೇಲೆ ನಿರ್ಬಂಧ ಹೇರುವುದು ಕಾನೂನುಬಾಹಿರ ಕ್ರಮವಾಗಿದೆ. ಇದರಿಂದ ಅಮೆರಿಕದ ಆರ್ಥಿಕತೆಗೆ ಧಕ್ಕೆ ಉಂಟಾಗುತ್ತದೆ. ಜತೆಗೆ, ಕುಟುಂಬಗಳನ್ನು ಬಲವಂತವಾಗಿ ಬೇರ್ಪಡಿಸಿದಂತಾಗುತ್ತದೆ ಎಂದು ಹೇಳಿದರು.
ಈ ವರ್ಷದ ಅಂತ್ಯದವರೆಗೆ ಎಚ್-1ಬಿ ಸೇರಿದಂತೆ ಹಲವು ಉದ್ಯೋಗಿ ಸಂಬಂಧಿ ವೀಸಾಗಳ ವಿತರಣೆ ಸ್ಥಗಿತಗೊಳಿಸಿ ಟ್ರಂಪ್ ಅವರು ಜೂ.22ರಂದು ಆದೇಶ ಹೊರಡಿಸಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.