Advertisement

ಬಾಣಸಿಗ ನೌಕರಿ ಆಯ್ಕೆಗೆ ಪಿಜಿ-ಪದವೀಧರರಿಂದ ಅರ್ಜಿ!

03:23 PM Jul 05, 2017 | Team Udayavani |

ದಾವಣಗೆರೆ: ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ ಅಡುಗೆಯವರು ಮತ್ತು ಅಡುಗೆ ಸಹಾಯಕಯರ ಹುದ್ದೆಗಳಿಗೆ ಸ್ನಾತಕೋತ್ತರ ಪದವಿ, ಕಲೆ, ವಾಣಿಜ್ಯ, ವಿಜ್ಞಾನ ಕಂಪ್ಯೂಟರ್‌ ಸೈನ್ಸ್‌ ಪದವಿ, ಬಿಇಡಿ, ಡಿಇಡಿ, ಐಟಿಐ…ಹೀಗೆ ಉನ್ನತ ವಿದ್ಯಾರ್ಹತೆ ಹೊಂದಿದವರೆಲ್ಲ ಅರ್ಜಿ ಸಲ್ಲಿಸುವ ಮೂಲಕ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಕೆಲಸ ಪಡೆಯುವುದು ಕಷ್ಟು. ಹಾಗಾಗಿ ಯಾವುದೇ ಕೆಲಸವಾಗಲಿ ಆಕಾಂಕ್ಷಿಗಳು ಸಿದ್ಧ ಎಂಬುದಕ್ಕೆ
ಸಾಕ್ಷಿಯಾಗಿದ್ದಾರೆ.

Advertisement

ಒಟ್ಟು 56 ಅಡುಗೆಯವರು ಮತ್ತು 92 ಅಡುಗೆ ಸಹಾಯಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅಡುಗೆಯರಿಗೆ 2,197, ಅಡುಗೆ  ಸಹಾಯಕರ ಹುದ್ದೆಗೆ 4,688 ಅರ್ಜಿಗಳು ಬಂದಿದ್ದವು.ದಾಖಲಾತಿ ಪರಿಶೀಲನೆಯಲ್ಲಿ ಅರ್ಹರಾದ ಅಭ್ಯರ್ಥಿಗಳಲ್ಲಿ 1:3 ಅಭ್ಯರ್ಥಿಗಳನ್ನ ವಿವಿಧ ಅಡುಗೆ ತಯಾರಿಸುವ ಪ್ರಾಯೋಗಿಕ ಪರೀಕ್ಷೆಗೆ ಆಯ್ಕೆ
ಮಾಡಲಾಗಿತ್ತು. ಅಂತಹ ಪ್ರಾಯೋಗಿಕ ಪರೀಕ್ಷೆಗೆ ಹಾಜರಾದವರಲ್ಲಿ ಕೆಲವರ ವಿದ್ಯಾರ್ಹತೆ ಕೇಳಿದರೆ ಅಚ್ಚರಿಪಡುವಂತಿತ್ತು.  ಆದರೂ, ಸರ್ಕಾರಿ ಕೆಲಸ ಎಂಬ ಕಾರಣಕ್ಕೆ ಪದವಿ ಬದಿಗಿಟ್ಟ ಖುಷಿಯಾಗಿಯೇ ಮಂಗಳವಾರ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಅಡುಗೆ ತಯಾರಿಕೆ ಪ್ರಾಯೋಗಿಕ ಪರೀಕ್ಷೆಗೆ ಬಂದಿದ್ದರು.

ಮಾಧ್ಯಮದ ತಂಡ ಭೇಟಿ ನೀಡಿದಾಗ ಅಲ್ಲಿ ಯುವ ಬಾಣಸಿಗರ ದಂಡೇ ಕಂಡು ಬಂದಿತು. 30 ನಿಮಿಷದಲ್ಲಿ ನಿಗದಿತ ಅಡುಗೆ ತಯಾರಿಸಬೇಕಾದ ಹಿನ್ನೆಲೆಯಲ್ಲಿ ಲಗುಬಗೆಯಿಂದ ಅಡುಗೆ ತಯಾರಿಕೆಯಲ್ಲಿ ತೊಡಗಿದ್ದರು.
ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚನ್ನಗಿರಿ ತಾಲ್ಲೂಕಿನ ಕೆರೆಕಟ್ಟೆಯ ಕಾಶೀನಾಥ್‌ ಅಡುಗೆಯವರು ಮತ್ತು ಅಡುಗೆ ಸಹಾಯಕರು ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದು ಅಡುಗೆಯವರ ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪ್ಪಿಟ್ಟು ಸಿದ್ಧಪಡಿಸಿದ್ದರು. ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಮಾಡಿರುವ ದಾವಣಗೆರೆ ತಾಲೂಕಿನ ಗೋಪನಾಳ್‌ ಗ್ರಾಮದ ಉಮೇಶ್‌ ತರಕಾರಿ ಪಲ್ಯ ತಯಾರಿಸಿದ್ದರು, ನ್ಯಾಮತಿಯ ಬಿಎ ಪದವೀಧರ ಹನುಮಂತರಾವ್‌ ಅವಲಕ್ಕಿ, ಉಪ್ಪಿಟ್ಟು,
ಉಚ್ಚಂಗಿದುರ್ಗದ, ಕಂಪ್ಯೂಟರ್‌ ಸೈನ್ಸ್‌ ಪದವೀಧರ ಜಿ. ಸಂತೋಷ್‌ ರಾಗಿಮುದ್ದೆ, ಅಗ್ರಿ ಡಿಪ್ಲೋಮ ಪದವೀಧರೆ ಚನ್ನಗಿರಿಯ ಸುಪ್ರೀತಾ ಹಾಗೂ ಹಿರೇಕೋಗಲೂರಿನ ಲೋಹಿತ್‌ ಪಿಳಿಯೋಗರೆ ಮತ್ತು ಕೇಸರಿಬಾತ್‌ ತಯಾರಿಸಿದರು.

ಡಿಇಡಿ ಪೂರೈಸಿರುವ ಹಾವೇರಿಯ ಮಮತ ಮಲಗಾಂವ್‌, ಕಲಾ ಪದವಿಯೊಂದಿಗೆ ಡಿಇಡಿ ಮುಗಿಸಿರುವ ದಾವಣಗೆರೆಯ ಮಂಗಳಾ, ಗೌರಮ್ಮ, ಬಿಕಾಂ ಪದವೀಧರೆ ಎನ್‌.ಆರ್‌. ರಂಜಿತಾ, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನ್ಸಿಕ್ಸ್‌ ಡಿಪ್ಲೋಮಾ ಮಾಡಿರುವ ರೇಣುಕಾ, ಬಳ್ಳಾರಿ ಜಿಲ್ಲೆಯ ಹುಲಿಕೆರೆಯ ಬಿಎಸ್ಸಿ ಪದವೀಧರೆ ಸ್ವಪ್ನ, ಬಿಎ ಡಿಎಡ್‌ ಪದವೀಧರೆ
ಚಿರಡೋಣಿಯ ಸೌಭಾಗ್ಯ, ಡಿಇಡಿ, ಬಿಎಸ್ಸಿ ಪದವೀದರೆ ಸೌಮ್ಯ… ಹೀಗೆ ಅನೇಕರು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದರು. 

ಕೆರೆಕಟ್ಟೆಯ ಕಾಶೀನಾಥ್‌ ಮಾತನಾಡಿ, ಅಡುಗೆಯವರು ಮತ್ತು ಅಡುಗೆ ಸಹಾಯಕರ ಎರಡೂ ಹುದ್ದೆಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿರುವುದು ಒಳ್ಳೆಯ ಅನುಭವ ಕೊಟ್ಟಿದೆ. ಎಂಎಸ್ಸಿ ಆದರೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ 
ಉದ್ಯೋಗ ಪಡೆಯುವುದು ಅಷ್ಟು ಸುಲಭವಿಲ್ಲ. ಯಾವುದೇ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದರೂ ಲಕ್ಷಾಂತರ ಮಂದಿ ಅರ್ಜಿ ಹಾಕುತ್ತಾರೆ ಮತ್ತು ಸ್ಪರ್ಧೆ ಹೆಚ್ಚಿರುತ್ತದೆ. ಅಡುಗೆ ಅಥವಾ ಅಡುಗೆ ಸಹಾಯಕರ ಹುದ್ದೆ ಯಾವುದರಲ್ಲಿ ಆಯ್ಕೆಯಾದರೂ
ಸಂತೋಷದಿಂದ ಕೆಲಸ ಮಾಡುತ್ತೇನೆ ಎಂದರು. 

Advertisement

ದಾವಣಗೆರೆ ಬಿಕಾಂ ಪದವೀಧರೆ ರಂಜಿತಾ ಮಾತನಾಡಿ, ಈ ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಕೆಲಸಕ್ಕೆ ಪ್ರಯತ್ನಿಸಿದ್ದೆ. ಮನೆಯಲ್ಲಿ ಅಡುಗೆ ಮಾಡಿ ಅನುಭವವಿದ್ದು, ಈ ಹುದ್ದೆ ಲಭಿಸಿದಲ್ಲಿ ಕಷ್ಟವಾಗುವುದಿಲ್ಲ ಎಂದು ತಿಳಿಸಿದರು.

ಬಿಎಸ್ಸಿ ಜೊತೆಗೆ ಡಿಇಡಿ ಮಾಡಿರುವ ದಾವಣಗೆರೆ ತಾಲೂಕಿನ ಲೋಕಿಕೆರೆಯ ರಮೇಶ್‌ ಮಾತನಾಡಿ, ಪ್ರಸ್ತುತ ಬೆಂಗಳೂರಿನ ಇನ್ಫೋಸಿಸ್‌ನ ಬಿಪಿಒ ಸೆಂಟರ್‌ನಲ್ಲಿ ತಿಂಗಳಿಗೆ 22 ಸಾವಿರದ ಕೆಲಸ ಮಾಡುತ್ತಿದ್ದೇನೆ. ಸಾಕಷ್ಟು ಒತ್ತಡದಲ್ಲೇ ಕೆಲಸ ಮಾಡಬೇಕಾಗುತ್ತದೆ. ಅಡುಗೆ ಇಲ್ಲ ಅಂದರೆ ಅಡುಗೆ ಸಹಾಯಕರ ಕೆಲಸ ಸಿಕ್ಕರೆ ತುಂಬ
ಅನುಕೂಲವಾಗುತ್ತದೆ. ಕುಟುಂಬದವರನ್ನು ನೋಡಿಕೊಂಡು ಒತ್ತಡರಹಿತವಾಗಿ ಕೆಲಸ ಮಾಡುವ ಅವಕಾಶ ದೊರೆತಂತಾಗುತ್ತದೆ ಎಂದು ಹೇಳಿದರು. ಹೀಗೆ ಅನೇಕ ಪರೀಕ್ಷಾರ್ಥಿಗಳು ತಮ್ಮ ಅನಿಸಿಕೆ, ಅನುಭವ ಹಂಚಿಕೊಂಡರು.

ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ನಿಗದಿಪಡಿಸಿದ್ದರೂ, ಅರ್ಜಿ ಹಾಕಿದವರಲ್ಲಿ ಬಹುತೇಕರು ಬಿಎ, ಬಿಎಸ್ಸಿ, ಬಿಕಾಂ, ಎಂಎ, ಎಂಎಸ್ಸಿ, ಬಿಎಡ್‌, ಡಿಎಡ್‌ ಸ್ನಾತಕ, ಸ್ನಾತಕೋತ್ತರ, ಡಿಪ್ಲೊಮಾ, ಐಟಿಐ ಸೇರಿದಂತೆ ಇಂಜಿನಿಯರಿಂಗ್‌
ಪದವೀಧರರೂ ಕೂಡ ಅರ್ಜಿ ಸಲ್ಲಿಸಿ, ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದು ಗಮನ ಸೆಳೆಯಿತು. ಮೂರು 
ಕೊಠಡಿಗಳಲ್ಲಿ ಎರಡು ಸಾಲುಗಳಲ್ಲಿ ತಲಾ ಹತ್ತು ಅಭ್ಯರ್ಥಿಗಳಂತೆ ಒಂದು ಕೊಠಡಿಯಲ್ಲಿ 20 ಜನರಿಗೆ ಅಡುಗೆ ತಯಾರಿಸಲು ಅವಕಾಶ ಕಲ್ಪಿಸಲಾಗಿದ್ದು, ಒಟ್ಟು ಮೂರು ಕೊಠಡಿಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಿತು. ಇಂದಿನ ಅಡುಗೆ ಸಹಾಯಕರ ಪರೀಕ್ಷೆಯಲ್ಲಿ 223 ಅಭ್ಯರ್ಥಿಗಳಲ್ಲಿ 211 ಅಭ್ಯರ್ಥಿಗಳು ಹಾಜರಾಗಿದ್ದರು.

ಪ್ರತಿ ಕೊಠಡಿಗೆ ಒಬ್ಬರು ನೋಡಲ್‌ ಅಧಿಕಾರಿ ಹಾಗೂ ಹೋಮ್‌ಸೈನ್ಸ್‌ ವಿಭಾಗದಿಂದ ಒಬ್ಬರು, ಪ್ರಾಂಶುಪಾಲರು, ವಿಸ್ತರಣಾಧಿ ಕಾರಿ ಮತ್ತು ವಾರ್ಡನ್‌ ಸೇರಿದಂತೆ ನಾಲ್ಕು ಜನ ಮೇಲ್ವಿಚಾರಕರನ್ನು ನೇಮಿಸಲಾಗಿತ್ತು.
ಇದೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಜಿಲ್ಲಾ ಮಟ್ಟದಲ್ಲಿ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅ ಧಿಕಾರಿ ಮನ್ಸೂರ್‌ ಪಾಷಾ ಹೇಳಿದರು. 

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌. ಅಶ್ವತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಿ. ನಜ್ಮಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ ಸುನೀತಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next