ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ದೀರ್ಘಾವಧಿಯ ಸ್ವಾವಲಂಬನೆ ಸಾಧಿಸಲು ಕೃಷಿಗೆ ಸೌರವಿದ್ಯುತ್ ಪಂಪ್‌ಸೆಟ್‌ಗಳ ಅಳವಡಿಕೆ ಅಗತ್ಯವಾಗಿದ್ದು, ಇದರಿಂದ ಸರಕಾರಕ್ಕೆ ವಾರ್ಷಿಕ ಅಂದಾಜು ಒಂದು ಲಕ್ಷ ಕೋಟಿ ರೂ. ಆರ್ಥಿಕ ಹೊರೆ ತಗ್ಗಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಇಂಧನ ಇಲಾಖೆ ಹಿರಿಯ ಅಧಿಕಾರಿಗಳು ಮತ್ತು ಸೋಲಾರ್ ನೀರಾವರಿ ಪಂಪ್ ತಯಾರಕರೊಂದಿಗೆ ನಡೆಸಿದ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಮೊದಲು ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಆಗುತ್ತಿತ್ತು. ಅನಂತರದಲ್ಲಿ ಮಳೆ ಕೈಕೊಟ್ಟ ಪರಿಣಾಮ ದಿಢೀರ್ ಬೇಡಿಕೆ ಹೆಚ್ಚಳವಾಯಿತು. ಪರಿಣಾಮ ಈಗ ಕೊರತೆ ಕಾಡುತ್ತಿದೆ. ವಿದ್ಯುತ್ ಕ್ಷೇತ್ರದಲ್ಲಿ ದೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕಾದರೆ, ಸೌರವಿದ್ಯುತ್ ಪಂಪ್‌ಸೆಟ್‌ಗಳ ಅಳವಡಿಕೆ ಅಧಿಕ ಆಗಬೇಕು. ಇದರಿಂದ ರೈತರು ಮತ್ತು ಸರಕಾರ ಇಬ್ಬರ ಮೇಲಿನ ಹೊರೆಯೂ ತಗ್ಗಲಿದೆ. ಅಷ್ಟೇ ಅಲ್ಲ, ಪರಿಸರಾತ್ಮಕ ಸುಸ್ಥಿರ ಬೆಳವಣಿಗೆಗೂ ಇದು ಪೂರಕವಾಗಲಿದೆ ಎಂದು ಹೇಳಿದರು.
34 ಲಕ್ಷ ಕೃಷಿ ಪಂಪ್‌ಸೆಟ್
ಸುಮಾರು 34 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಇವುಗಳನ್ನು ಸೋಲಾರ್ ಪಂಪ್‌ಸೆಟ್‌ಗಳಿಗೆ ಪರಿವರ್ತನೆ ಮಾಡಿದರೆ, ಸರಕಾರಕ್ಕೆ ವಾರ್ಷಿಕ ಒಂದು ಲಕ್ಷ ಕೋಟಿ ರೂ. ಮೊತ್ತದಷ್ಟು ಆರ್ಥಿಕ ಹೊರೆ ತಗ್ಗಲಿದೆ. ಜತೆಗೆ ತೈಲ ಆಮದು ಕೂಡ ಗಣನೀಯವಾಗಿ ಇಳಿಕೆಯಾಗಲಿದೆ. ಪ್ರಸ್ತುತ ವಾರ್ಷಿಕ 1.38 ಬಿಲಿಯನ್ ಲೀಟರ್ ಡೀಸೆಲ್ ಬಳಸಲಾಗುತ್ತಿದೆ. ಈ ಎಲ್ಲ ದೃಷ್ಟಿಯಿಂದ ಸೋಲಾರ್ ಪಂಪ್‌ಸೆಟ್‌ಗಳನ್ನು ಉತ್ತೇ ಜಿಸುವ ತುರ್ತು ಅಗತ್ಯ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ 6,801 ಕೃಷಿ ಸೋಲಾರ್ ಪಂಪ್‌ಸೆಟ್‌ಗಳಿವೆ. ಇದರಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕೆಆರ್‌ಇಡಿಎಲ್) 3,710, ಸಣ್ಣ ನೀರಾವರಿ ಇಲಾಖೆಯ 2,075, ಕೃಷಿ ಇಲಾಖೆಯ 201, ಬೆಸ್ಕಾಂನ 310, ಕೆಆರ್‌ಇಡಿಎಲ್ ಕೇಂದ್ರದ ಪಿಎಂ- ಕುಸುಮ್ ಯೋಜನೆ ಅಡಿ ಅಳವಡಿಸಿರುವ 513 ಪಂಪ್‌ಸೆಟ್‌ಗಳು ಸೇರಿವೆ.
ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ತಗಲುವ ವೆಚ್ಚದಲ್ಲಿ ಹೊಸ ಮತ್ತು ನವಿಕರಿಸಬಹುದಾದ ಇಂಧನ ಸಚಿವಾಲಯದಿಂದ ಶೇ. 30ರಷ್ಟು ಅನುದಾನ ನೀಡಲಿದೆ. ಫಲಾನುಭವಿಯು ಒಂದು ಲಕ್ಷ ರೂ. (ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಉಚಿತ) ಭರಿಸಬೇಕಾಗುತ್ತದೆ. ಉಳಿದ ಮೊತ್ತವನ್ನು ರಾಜ್ಯ ಸರಕಾರ ಭರಿಸುತ್ತದೆ. 2014-15ರಲ್ಲಿ ಸೋಲಾರ್ ಪಂಪ್‌ಸೆಟ್ ಯೋಜನೆ ಪರಿಚಯಿಸ ಲಾಗಿದೆ ಎಂದು ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು.