Advertisement

ಟ್ರ್ಯಾಕ್ಟರ್ ಕಂಪನಿಯ ಕಿರುಕುಳ : ದಯಾಮರಣ ಕೋರಿ ರೈತರಿಂದ ಅರ್ಜಿ

02:57 PM Apr 12, 2021 | Team Udayavani |

ವಿಜಯಪುರ : ಜಿಲ್ಲೆಯ ರೈತರೊಬ್ಬರು ಸೋಮವಾರ ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ದಯಾ ಮರಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾಡಳಿತ ಸ್ವೀಕೃತಿ ನೀಡಿದೆ.

Advertisement

ವಿಜಯಪುರ ತಾಲೂಕಿನ ಕತ್ನಳ್ಳಿ (ಕತಕನಹಳ್ಳಿ) ಗ್ರಾಮದ ಹಿರಗಪ್ಪ ಕೆ. ಅಲ್ಲಾಪುರ ಎಂಬ ರೈತರೇ ದಯಾ ಮರಣಕ್ಕೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದವರು. ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗೆ ತಾವು ಸಲ್ಲಿಸಿರುವ ದಯಾ ಮರಣ ಕೋರಿಕೆ ಅರ್ಜಿಯನ್ನು ರವಾನಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಟ್ರ್ಯಾಕ್ಟರ್ ಕೊಳ್ಳುವ ವಿಷಯದಲ್ಲಿ ಒಂದು ಬ್ಯಾಂಕ್ ಹಾಗೂ ಟ್ರ್ಯಾಕ್ಟರ್ ಉತ್ಪಾದಿಸುವ ಕಂಪನಿಯೊಂದರ ಹಣಕಾಸು ಸಂಸ್ಥೆ ತನಗೆ ಸಾಲ ನೀಡಿದ್ದವು. ಆನಂತರ ಸಾಲ ಮರು ಪಾವತಿ ವಿಷಯದಲ್ಲಿ ತೊಂದರೆ ಉಂಟಾಗಿತ್ತು. ಈ ಹಂತದಲ್ಲಿ ಟ್ರ್ಯಾಕ್ಟರ್ ಉತ್ಪಾದಕ ಕಂಪನಿಯ ಹಣಕಾಸು ಸಂಸ್ಥೆ ನನ್ನ ಟ್ರ್ಯಾಕ್ಟರ್ ಹಾಗೂ ಟ್ರಾಲಿ, ಎರಡು ನೇಗಿಲನ್ನು ಹೊತ್ತೊಯ್ದರು. ಖಾಸಗಿ ಕಂಪನಿಯ ವಿರುದ್ಧ ಸಾಲ ನೀಡಿದ ಬ್ಯಾಂಕ್ ಹೂಡಿದ್ದ ಪ್ರಕರಣದಲ್ಲಿ ನ್ಯಾಯಾಲಯ ಬ್ಯಾಂಕ್ ಪರ ತೀರ್ಪು ನೀಡಿದೆ. ಈ ತೀರ್ಪಿನ ವಿರುದ್ಧ ಟ್ರ್ಯಾಕ್ಟರ್ ಕಂಪನಿ ಹೂಡಿದ್ದ ದಾವೆಯೂ ವಜಾ ಗೊಂಡಿದೆ. ಸಾಲಮುಕ್ತಗೊಳಿಸಿದೆ.

ಇಷ್ಟಾದರೂ ತಾವು ವಶಕ್ಕೆ ಪಡೆದಿರುವ ನನ್ನ ಟ್ರ್ಯಾಕ್ಟರ್, ಟ್ರಾಲಿ, ಎರಡು ನೇಗಿಲನ್ನು ಮರಳಿ ಕೊಡಲು ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಇಡೀ ಪ್ರಕರಣದಿಂದ ನನಗೆ  ಆಗಿರುವ ಅನ್ಯಾಯ ಸರಿಪಡಿಸಲು 3 ಲಕ್ಷ ರೂ. ಆರ್ಥಿಕ ಪರಿಹಾರ ನೀಡುವ ಭರವಸೆ ನೀಡಿದ್ದ  ಟ್ರ್ಯಾಕ್ಟರ್ ಕಂಪನಿ ಡೀಲರ್ ಕೂಡ ಇದೀಗ ಮೋಸ ಮಾಡಿದ್ದಾರೆ ಎಂದು‌ ಪ್ರಕರಣವನ್ನು ವಿವರಿಸಿದ್ದಾರೆ.

ಒಂದೆಡೆ ಟ್ರ್ಯಾಕ್ಟರ್ ಇಲ್ಲದೆ, ಮತ್ತೊಂದೆಡೆ ಬ್ಯಾಂಕ್, ಟ್ರ್ಯಾಕ್ಟರ್ ಕಂಪನಿ ಹಾಗೂ ಡೀಲರ್ ಇವರು ಟ್ರ್ಯಾಕ್ಟರ್ ಸಾಲದ ವಿಷಯದಲ್ಲಿ ಅನಗತ್ಯವಾಗಿ ನನಗೆ ಕಿರುಕುಳ ನೀಡಿದ್ದಾರೆ. ನ್ಯಾಯಾಲಯದ ತೀರ್ಪಿನ ಬಳಿಕವೂ ನನಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವ ನಾನು, ಕುಟುಂಬ ನಿರ್ವಹಣೆಗೂ ಪರದಾಡುವಂತಾಗಿದೆ. ಕಾರಣ ನನಗೆ ದಯಾ ಮರಣಕ್ಕೆ ಅನುಮತಿ ಕೋಡಿ ಎಂದು ವಿಜಯಪುರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ರೈತನ ಮನವಿ ಸ್ವೀಕರಿಸಿರುವ ಜಿಲ್ಲಾಡಳಿತ ಸ್ವೀಕೃತಿ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next