ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದಿಂದ ಸ್ಥಾಪಿಸಲಾಗಿರುವ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ 2019ನೇ ಸಾಲಿನ ಎಂಜಿನಿಯರಿಂಗ್ ಮತ್ತು ಎಂಬಿಬಿಎಸ್ ಅಧ್ಯಯನಾಕಾಂಕ್ಷಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೇರಿರುವ ಕೊಂಕಣಿ ಮಾತೃಭಾಷೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾತೃಭಾಷೆ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. 2019ನೇ ಇಸವಿಯಲ್ಲಿ ಎಂಜಿನಿಯರಿಂಗ್ ಅಥವಾ ಎಂಬಿಬಿಎಸ್ ಕೋರ್ಸಿನ ಮೊದಲ ವರ್ಷಕ್ಕೆ ಪ್ರವೇಶ ಪಡೆದುಕೊಳ್ಳುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಮುಖ್ಯ ವಿಷಯಗಳಲ್ಲಿ ಶೇ.70ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿರಬೇಕು ಮತ್ತು ಸಿಇಟಿ ಅಥವಾ ಇತರ ಪ್ರವೇಶ ಪರೀಕ್ಷೆಗಳಲ್ಲಿ 20 ಸಾವಿರಕ್ಕಿಂತ ಒಳಗಿನ ರ್‍ಯಾಂಕ್ ಗಳಿಸಿರಬೇಕು. ಕುಟುಂಬದ ವಾರ್ಷಿಕ ವರಮಾನ 5 ಲಕ್ಷ ರೂ.ಗಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು.
ಈ ನಿಟ್ಟಿನಲ್ಲಿ ಎರಡು ದೃಢೀಕರಣಗಳನ್ನು ಕುಟುಂಬ ವೈದ್ಯರು ಮತ್ತು ಕುಟುಂಬದ ಸ್ಥಿತಿಗತಿ ಬಲ್ಲ ಸಿಎ ಅವರಿಂದ ಪಡೆದು ಸಲ್ಲಿಸಬೇಕು. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಉದ್ಯೋಗ ಗಳಿಸಿದ ಬಳಿಕ ಇಬ್ಬರು ಅಭ್ಯರ್ಥಿಗಳನ್ನು ಪೋಷಿಸಲು ನೈತಿಕನಾಗಿ ಬದ್ಧರಾಗಬೇಕು. 2019-20ನೇ ವರ್ಷದಲ್ಲಿ ಒಟ್ಟು 20 ದಿನಗಳನ್ನು ಸಮುದಾಯ ಸೇವೆಗೆ ಮೀಸಲಿಡಲು ಬದ್ಧರಾಗಿರಬೇಕು.
ಮೇಲ್ಕಂಡ ಅರ್ಹತೆಗಳಿರುವ ಅರ್ಹ ಅಭ್ಯರ್ಥಿಗಳನ್ನು ಒಂದು ಸ್ವತಂತ್ರ ಪರಿಶೀಲನಾ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಎಂಜಿನಿಯರಿಂಗ್ ಅಥವಾ ಎಂಬಿಬಿಎಸ್ ಕೋರ್ಸಿನ ಮೊದಲ ವರ್ಷಕ್ಕೆ ಪ್ರವೇಶವನ್ನು ಪಡೆಯುವ ವಿದ್ಯಾರ್ಥಿಗಳು ಅನುಕ್ರಮವಾಗಿ 40,000 ರೂ. ಮತ್ತು 50,000 ರೂ. ವಿದ್ಯಾರ್ಥಿ ವೇತನವನ್ನು 2019ರಲ್ಲಿ ಪಡೆಯಲಿದ್ದಾರೆ.
ಅಭ್ಯರ್ಥಿಗಳು ವಿಶ್ವ ಕೊಂಕಣಿ ಕೇಂದ್ರದ www.vishwakonkani.org ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜು.10.