ಕ್ಯಾಲಿಫೋರ್ನಿಯಾ : ವಿಶ್ವ ವಿಖ್ಯಾತ ಆ್ಯಪ್ಪಲ್ ಕಂಪೆನಿ ಮೂರು ಹೊಸ ಐಫೋನ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಟಾಪ್ ಆಫ್ ಲೈನ್ ಹ್ಯಾಂಡ್ ಸೆಟ್ ಕೂಡ ಸೇರಿದೆ. ಕಳೆದ ಹತ್ತು ವರ್ಷಗಳಲ್ಲಿ ಮೂಲ ಐಫೋನ್-10 ಬಿಡುಗಡೆಯಾದಂದಿನಿಂದ ಆ್ಯಪ್ಪಲ್ ಕಂಪೆನಿಯ ಈ ತನಕದ ಮಹತ್ತರ ಸೀಮೋಲ್ಲಂಘನ ಇದೆಂದು ತಿಳಿಯಲಾಗಿದೆ.
ಆ್ಯಪ್ಪಲ್ ಚೀಫ್ ಎಕ್ಸಿಕ್ಯುಟಿವ್ ಟಿಮ್ ಕುಕ್ ಅವರು ಪ್ರೀಮಿಯಂ ಐಫೋನ್ 10, ಹೊಸ ಐಫೋನ್ 8 ಮತ್ತು 8 ಪ್ಲಸ್ ಅನಾವರಣವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಇವುಗಳಿಗೆ ಫೇಸ್ ಐಡಿ, ವಯರ್‌ಲೆಸ್ ಚಾರ್ಜಿಂಗ್ ಸೌಕರ್ಯ ಇದೆ.
ಆ್ಯಪ್ಪಲ್ ಸಹ ಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ಅವರ ಹೆಸರಿನ ಹೊಸ ಕ್ಯಾಂಪಸ್ ಥಿಯೇಟರ್‌ನಲ್ಲಿ ನಡೆದ ಪ್ರಪ್ರಥಮ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಕುಕ್ ಅವರು, “ಮೊದಲ ಐ ಫೋನ್ ಬಿಡುಗಡೆ ಹತ್ತು ವರ್ಷಗಳ ತರುವಾಯ ಆ್ಯಪ್ಪಲ್ ಇದೀಗ ಬಿಡುಗಡೆ ಮಾಡಿರುವ ಹೊಸ ಫ್ಲಾಗ್ ಶಿಪ್ ಹ್ಯಾಂಡ್‌ಸೆಟ್ ನಿಜಕ್ಕೂ ಒಂದು ಮಹತ್ತರ ಮೈಲುಗಲ್ಲಾಗಿದೆ’ ಎಂದು ಸಂಭ್ರಮದಿಂದ ಹೇಳಿದರು.
“ಹತ್ತು ವರ್ಷಗಳ ತರುವಾಯ ನಾವು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿ ಇಲ್ಲಿದ್ದೇವೆ ಮತ್ತು ನಮ್ಮ ಹೊಸ ಮೂರು ಉತ್ಪನ್ನಗಳು ಮುಂದಿನ ದಶಕದ ವರೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಪಥವನ್ನು ರೂಪಿಸಲಿದೆ’ ಎಂದು ಟಿಮ್ ಕುಕ್ ಹೇಳಿದರು. ಐಫೋನ್ ಹತ್ತು – ಮೂಲ ಐಫೋನ್ ಬಳಿಕದ ಬಹುದೊಡ್ಡ ಜಿಗಿತವಾಗಿದೆ ಎಂದವರು ಸಂಭ್ರಮಿಸಿದರು.
ಐಫೋನ್ 10 ಸಿಲ್ವರ್ ಮತ್ತು ಸ್ಪೇಸ್ ಗ್ರೇ ಬಣ್ಣಗಳಲ್ಲಿ ಸಿಗುತ್ತವೆ. 64 ಜಿಬಿ ಮತ್ತು 256 ಜಿಬಿ ಮಾಡೆಲ್‌ಗಳ ಆ್ಯಪ್ಪಲ್ ಡಾಟ್ ಕಾಮ್ ಮತ್ತು ಆ್ಯಪಲ್ ಸ್ಟೋರ್‌ಗಳಲ್ಲಿನ ಆರಂಭಿಕ ದರ 999 ಡಾಲರ್. ಆ್ಯಪ್ಪಲ್ ಅಧಿಕೃತ ಮರು ಮಾರಾಟಗಾರರಲ್ಲೂ ಮತ್ತು ವಾಹಕಗಳ ಮೂಲಕವೂ ಗ್ರಾಹಕರಿಗೆ ಸಿಗಬಲ್ಲ ಆ್ಯಪ್ಪಲ್ 10 ದರದಲ್ಲಿ ವ್ಯತ್ಯಾಸವಿದೆ.