ಕನ್ನಡದಲ್ಲಿ ಹಲವು ಸದಭಿರುಚಿ ಸಿನಿಮಾಗಳನ್ನು ನಿರ್ದೇಶಿಸಿದ ಹಿರಿಯ ನಿರ್ದೇಶಕ ರಾಜ್ ಕಿಶೋರ್ ಅವರ ಪುತ್ರಿ ಸಿಂಧೂ ಗೌಡ ಈಗ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಈಗಾಗಲೇ ಒಂದಷ್ಟು ಧಾರಾವಾಹಿಗಳು, ಕಿರುಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಸಿಂಧೂ ಗೌಡ ಮೊದಲ ಬಾರಿಗೆ “ಆಪಲ್ ಕಟ್’ ಎಂಬ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಿದ್ದು, ಸದ್ಯ ಈ ಸಿನಿಮಾ ಪೋಸ್ಟ್ ಪೊ›ಡಕ್ಷನ್ ಹಂತದಲ್ಲಿದೆ.
ಇದೇ ವೇಳೆ ಮಾಧ್ಯಮಗಳ ಮುಂದೆ ಬಂದಿದ್ದ ನಿರ್ದೇಶಕಿ ಸಿಂಧೂ ಗೌಡ ಮತ್ತು ಚಿತ್ರತಂಡ, “ಆಪಲ್ ಕಟ್’ ಸಿನಿಮಾದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು. ಮೊದಲಿಗೆ “ಆಪಲ್ ಕಟ್’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕಿ ಸಿಂಧೂ ಗೌಡ, “ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಸಿನಿಮಾ. ಐವರು ಸ್ನೇಹಿತರ ನಡೆಯುವ ಕಥೆ ಈ ಸಿನಿಮಾದಲ್ಲಿದೆ. ಒಂದಷ್ಟು ನಿಗೂಢ ಕೊಲೆಗಳು ನಡೆಯುತ್ತಿರುತ್ತದೆ. ಆ ಕೊಲೆಗಳಿಗೆ ಕಾರಣವೇನು ಎಂಬುದರ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಕನ್ನಡದಲ್ಲಿ ಮೊದಲ ಬಾರಿಗೆ ಮಾನವ ಶಾಸ್ತ್ರ (ಆಂಥ್ರೊಪಾಲಜಿ) ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತದೆ. ಈ ಹಿಂದೆ ಒಂದಷ್ಟು ಧಾರಾವಾಹಿಗಳು, ಶಾರ್ಟ್ ಫಿಲಂಗಳಲ್ಲಿ ಕೆಲಸ ಮಾಡಿದ ಅನುಭವದಲ್ಲಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದೇನೆ’ ಎಂದು ಸಿನಿಮಾದ ಕಥಾಹಂದರ ವಿವರಿಸಿದರು.
ಚಿತ್ರದ ಬಗ್ಗೆ ಮಾತನಾಡಿದ ನಾಯಕ ಸೂರ್ಯ ಗೌಡ, “ನಾನು ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದಿದ್ದು, ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಸತ್ಯ ಎಂಬ ಹೆಸರಿನ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡು ನಟಿಸಿದ್ದೇನೆ. ಇದರಲ್ಲಿ ಕಥೆಯಷ್ಟೇ ತಾಯಿ-ಮಗನ ಬಾಂಧವ್ಯವನ್ನು ಅದ್ಭುತವಾಗಿ ತೋರಿಸಲಾಗಿದೆ’ ಎಂದರು.
“ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ಒಳ್ಳೆ ಕಂಟೆಂಟ್ ಇರುವ ಮರ್ಡರ್ ಮಿಸ್ಟರಿ ಸಿನಿಮಾದಲ್ಲಿ ಸೈಕಾಲಜಿ ಸ್ಟೂಡೆಂಟ್ ಆಗಿ ನಟಿಸಿದ್ದೇನೆ’ ಎಂಬುದು ನಾಯಕಿ ಅಶ್ವಿನಿ ಪೋಲೆಪಲ್ಲಿ ಮಾತು. ಶಿಲ್ಪಾ ಪ್ರಸನ್ನ ನಿರ್ಮಿಸಿರುವ “ಆಪಲ್ ಕಟ್’ ಸಿನಿಮಾದಲ್ಲಿ ಸೂರ್ಯ ಗೌಡ ನಾಯಕನಾಗಿ, ಅಶ್ವಿನಿ ಪೋಲೆಪಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಉಳಿದಂತೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ, ಬಲರಾಜವಾಡಿ, ಅಭಿಜಿತ್, ಮೀನಾಕ್ಷಿ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಜಿ.ಎಸ್.ಕಾರ್ತಿಕ ಸುಧನ್