ರಾಯಚೂರು: ನಗರದಲ್ಲಿ ಜನಸಂದಣಿ ಹೆಚ್ಚಾಗಿ ರಸ್ತೆಗಳು ಕಿರಿದಾಗಿದ್ದರೆ, ಮತ್ತೂಂದೆಡೆ ಸಣ್ಣ ಪುಟ್ಟ ವ್ಯಾಪಾರಿಗಳು ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಕೂಡಲೇ ತೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಜನಹಿತ ಸಂಸ್ಥೆಯ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದಲ್ಲಿ ಜನ ಸಂಚಾರ, ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆ ರಸ್ತೆ ಹಾಗೂ ಫುಟ್‌ಪಾತ್‌ಗಳ ಅಗಲೀಕರಣ ಮಾಡಬೇಕು. ಆದರೆ, ಚಿಕ್ಕದಾದ ಫುಟ್‌ಪಾತ್‌ಗಳನ್ನು ಕೂಡ ವ್ಯಾಪಾರಸ್ಥರೇ ಆಕ್ರಮಿಸಿಕೊಂಡಿದ್ದು, ಜನ ಓಡಾಡುವುದೇ ಕಷ್ಟ ಎನ್ನುವ ಸ್ಥಿತಿ ಇದೆ.
ತೀನ್ ಕಂದೀಲ್ ಪ್ರದೇಶದ ಸುತ್ತಮುತ್ತ ಹೂ, ಹಣ್ಣು ಮಾರಾಟಗಾರರ ಹಾವಳಿ ಹೆಚ್ಚಾಗಿದೆ. ಅಲ್ಲಿ ಫುಟ್‌ಪಾತ್ ಒತ್ತುವರಿ ಮಾಡಿದ್ದಲ್ಲದೇ ರಸ್ತೆಗಳ ಮಧ್ಯೆಯೇ ವ್ಯಾಪಾರ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಸ್ಟೇಷನ್ ರಸ್ತೆ, ಬಸ್ ನಿಲ್ದಾಣದ ಎದುರು ಫುಟ್‌ಪಾತ್ ಗಳನ್ನು ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿದ್ದಾರೆ.
ಒತ್ತುವರಿ ಮಾಡಿಕೊಂಡ ಫುಟ್ ಪಾತ್ ಗಳನ್ನು ತೆರವುಗೊಳಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನಯಾಗಿಲ್ಲ. ಅಲ್ಲದೇ ಅಧಿಕಾರಿಗಳ ಸಹಾಯದಿಂದ ಫುಟ್ ಪಾತ್ ಗಳನ್ನು ವ್ಯಾಪಾರಸ್ಥರು ಒತ್ತುವರಿ ಮಾಡುತ್ತಿದ್ದಾರೆ. ಕೂಡಲೇ ನಗರದಲ್ಲಿ ಒತ್ತುವರಿ ಮಾಡಿಕೊಂಡ ಫುಟ್ ಪಾತ್‌ಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಸ್ಥೆಯ ಅಧ್ಯಕ್ಷ ಶಿವಬಸಪ್ಪ ಮಾಲಿಪಾಟೀಲ್, ಕಾರ್ಯದರ್ಶಿ ಡಾ| ಆನಂದತೀರ್ಥ ಫಡ್ನಿàಸ್, ಸದಸ್ಯರಾದ ಪ್ರಭು ಶಾಸ್ತ್ರಿ, ಮಲ್ಲಿಕಾರ್ಜುನ ಹಳ್ಳೂರು ಸೇರಿ ಅನೇಕರು ಉಪಸ್ಥಿತರಿದ್ದರು.