ಆಳಂದ: ಪಟ್ಟಣದಲ್ಲಿನ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ದೂರದ ಪ್ರದೇಶಕ್ಕೆ ಸ್ಥಳಾಂತರಿಸುವ ಕ್ರಮ ಖಂಡಿಸಿದ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕದ ಕಾರ್ಯಕರ್ತರು ಮೊದಲಿನ ಸ್ಥಳದಲ್ಲೇ ಮುಂದುವರಿಯಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಮೂಲಕ ಡಿಡಿಪಿಯುಗೆ ಮನವಿ ಸಲ್ಲಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೋರಳ್ಳಿ ಮಾರನಾಡಿ, ಪಟ್ಟಣದಲ್ಲಿನ ಏಕೈಕ ಸರ್ಕಾರಿ ಬಾಲಕಿಯರ ಕಾಲೇಜನ್ನು ಹೊರವಲಯದ ಸುರಕ್ಷಿತವಲ್ಲದ ನಿರ್ಜನ ಪ್ರದೇಶದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸುವುದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತದೆ. ಬಸ್ ಸೌಕರ್ಯವಿಲ್ಲ. ಪಟ್ಟಣ ಸೇರಿ ಗ್ರಾಮೀಣ ಭಾಗದ ವಿದ್ಯಾರ್ಥಿಯನಿರಿಗೆ ದೂರದ ಕಾಲೇಜಿಗೆ ಹೋಗುವುದು ಅಸಾಧ್ಯವಾಗಿದೆ. ಇಂಥ ಗಂಭೀರವಾದ ವಿಷಯವನ್ನು ಸಂಬಂಧಿತ ಅಧಿಕಾರಿಗಳ ಹಗುರವಾಗಿ ಪರಿಗಣಿಸಿದ್ದಾರೆ ಎಂದು ಹರಿಹಾಯ್ದರು.
ನಿರ್ಜನ ಪ್ರದೇಶಕ್ಕೆ ಕಾಲೇಜು ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಪಾಲಕರು ಗೊಂದಲಕ್ಕೆ ಸಿಲುಕಿದ್ದಾರೆ. ತಮ್ಮ ಮಕ್ಕಳು ಕಾಲೇಜಿಗೆ ಹೋಗುವುದೇ ಬೇಡ ಎಂದು ಕಳುಹಿಸುತ್ತಿಲ್ಲ. ವಿದ್ಯಾರ್ಥಿನಿಯರಿಗೆ ಅನುಕೂಲ ಒದಗಿಸುವ ಬದಲು ಅನಾನುಕೂಲ ಮಾಡುವುದು ಸರಿಯಲ್ಲ. ವಿದ್ಯಾರ್ಥಿನಿಯರ ಭವಿಷ್ಯದ ದೃಷ್ಟಿಯಿಂದ ಸೂಕ್ತ ಸ್ಥಳದಲ್ಲಿ ತಕ್ಷಣವೇ ಕಾಲೇಜು ಕಟ್ಟಡ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ತಾಲೂಕಿನ ಎಲ್ಲ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿನಿಯರೊಂದಿಗೆ ಜುಲೈ 1ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ ಆವರಿಗೆ ಮನವಿ ಸಲ್ಲಿಸಿದರು.
ಸಂಘಟನೆ ಯುವ ಘಟಕದ ತಾಲೂಕು ಅಧ್ಯಕ್ಷ ಪ್ರಕಾಶ ಪಾಟೀಲ, ಮುಖಂಡ ಶಿವಲಿಂಗಪ್ಪ ಪಟ್ಟಣಶೆಟ್ಟಿ, ನಾಗರಾಜ ಘೋಡಕೆ, ದೇವಾ ವಾಗ್ದರಿ, ಅಣಿವೀರಯ್ಯ ಸ್ವಾಮಿ, ಲಿಂಗರಾಜ ಜೆರಟಗಿ, ಮಹೇಶ ಕೋಟೆ, ಪರಶುರಾಮ ಜಮಾದಾರ, ವಿದ್ಯಾರ್ಥಿನಿಯರಾದ ನಿಕಿತಾ, ಯಶೋಧಾ, ಅಂಬಿಕಾ, ಪ್ರೀಯಂಕಾ, ಪ್ರತೀಕ್ಷಾ, ಈರಮ್ಮಾ, ಶೃತಿ ಪಾಟೀಲ, ಷರಾ, ಆರೀಫಾ, ಜಯಿಬಾ, ಶೋಭಾ ಮತ್ತು ಸುಶಮಿತಾ ಮತ್ತಿತರು ಪಾಲ್ಗೊಂಡಿದ್ದರು.
ಮನವಿ ಸ್ವೀಕರಿಸಿದ ತಹಸೀಲ್ದಾರರು ಸಂಬಂಧಿತ ಅಧಿಕಾರಿಗಳಿಗೆ ಕಳುಹಿಸಿಕೊಟ್ಟು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಅವರು ಭರವಸೆ ನೀಡಿದರು.