Advertisement

ಬೇಡಿಕೆ ಈಡೇರಿಸಲು ಜಿಪಂ ಅಧ್ಯಕ್ಷೆಗೆ ಮನವಿ

04:29 PM Oct 04, 2020 | Suhan S |

ಮುದ್ದೇಬಿಹಾಳ: ತಾಲೂಕಿನ ಕಾಳಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಸ್ಪತ್ರೆ ವಾಸ್ತವ್ಯಕ್ಕೆ ಆಗಮಿಸಿದ್ದ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರಿಗೆ ಹಲವರು ಮನವಿ ಸಲ್ಲಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾರೆ.

Advertisement

ಕೇಂದ್ರದ ವೈದ್ಯಾಧಿಕಾರಿ ಡಾ| ರಂಗನಾಥ ವೈದ್ಯ ಸಲ್ಲಿಸಿದ ಮನವಿಯಲ್ಲಿ ಆಸ್ಪತ್ರೆಗೆ ಅಗತ್ಯ ಇರುವ ಸ್ಕ್ಯಾನರ್‌, ಜನರೇಟರ್‌, ಕಾಂಪೌಂಡ್‌ ಸೇರಿ 7 ಪ್ರಮುಖ ಬೇಡಿಕೆ ಈಡೇರಿಕೆಗೆ ಕೋರಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ಗುತ್ತಿಗೆ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ನೌಕರರು ಸಲ್ಲಿಸಿದ ಮನವಿಯಲ್ಲಿ ಕಳೆದ ತಿಂಗಳಿಂದ ಸಂಬಳ ಇಲ್ಲದೆ ತೊಂದರೆ ಉಂಟಾಗಿದೆ. ಈ ಬಗ್ಗೆ ಹಲವು ಬಾರಿ  ಸಂಬಂಧಿಸಿದವರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ರಾಜ್ಯಾದ್ಯಂತ ಹೊರ ಗುತ್ತಿಗೆ ನೌಕರರು ಸಮಾನ ವೇತನಕ್ಕಾಗಿ ಹೋರಾಟ ನಡೆಸಿದ್ದಾರೆ. ನಮ್ಮ ಸಮಸ್ಯೆ ಸರ್ಕಾರದ ಗಮನಕ್ಕೆ ತಂದು ಬಗೆಹರಿಸಬೇಕು ಎಂದು ಮನವಿ ಮಾಡಿಕೊಂಡರು. ರೈತರು ಸಲ್ಲಿಸಿದ ಮನವಿಯಲ್ಲಿ ಗ್ರಾಮದಿಂದ ಹೊಲಕ್ಕೆ ಹೋಗುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಕೂಡಲೇ ಜಿಪಂನಿಂದ ವಿಶೇಷ ಅನುದಾನ ಕೊಡಿಸಿ ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಆಗ್ರಹಿಸಿದರು.

ಎಲ್ಲ ಮನವಿ ಸ್ವೀಕರಿಸಿದ ಸುಜಾತಾ ಅವರು ಈ ತಿಂಗಳಲ್ಲೇ ಆಸ್ಪತ್ರೆಗೆ ಅಗತ್ಯ ಇರುವ ಸ್ಕ್ಯಾನರ್‌, ಜನರೇಟರ್‌ ಸೇರಿ ಪ್ರಮುಖ ನಾಲ್ಕು ಬೇಡಿಕೆಯನ್ನು ನಂತರ ಹಂತ ಹಂತವಾಗಿ ಇನ್ನುಳಿದ ಬೇಡಿಕೆಯನ್ನು ಈಡೇರಿಸುವುದಾಗಿ, ಹೊರ ಗುತ್ತಿಗೆ ನೌಕರರ ಸಮಸ್ಯೆಯನ್ನು ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆಯುವುದಾಗಿ ಹಾಗೂ ಹದಗೆಟ್ಟ ರಸ್ತೆಗಳಿಗೆ ತಾತ್ಕಾಲಿಕವಾಗಿ ದುರಸ್ತಿ ಮಾಡಲು ಗ್ರಾಪಂಗೆ ಸೂಚಿಸುವುದಾಗಿ ಭರವಸೆ ನೀಡಿದರು.

ಜಿಪಂ ಯೋಜನಾ ನಿರ್ದೆಶಕ ಸಿ.ಬಿ. ದೇವರಮನಿ, ಜಿಪಂ ಯೋಜನಾಧಿಕಾರಿ ಸಿ.ಬಿ. ಕುಂಬಾರ, ತಾಪಂ ಇಒ ಶಶಿಧರ ಶಿವಪುರೆ, ಜಿಪಂ ಸದಸ್ಯೆಯರಾದ ಪ್ರೇಮಬಾಯಿ ಚವ್ಹಾಣ, ಪದ್ಮಾವತಿ ವಾಲೀಕಾರ, ಗ್ರಾಪಂ ಮಾಜಿ ಅಧ್ಯಕ್ಷ ಜಾವೀದ್‌ ಇನಾಮದಾರ, ಕಾಂಗ್ರೆಸ್‌ ಧುರೀಣರಾದ ಸೋಮನಾಥ ಕಳ್ಳಿಮನಿ, ಸಂತೋಷ ಚವ್ಹಾಣ, ಮುತ್ತಣ್ಣ ಮುತ್ತಣ್ಣವರ, ಲಕ್ಷ್ಮಣ ಲಮಾಣಿ, ನಾಗರಾಜ ತಂಗಡಗಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next