ಬೆಂಗಳೂರು: ರಾಜ್ಯ ಸರ್ಕಾರದ ಸಂಸದೀಯ ಕಾರ್ಯದರ್ಶಿಗಳ ಹುದ್ದೆಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನೇಮಿಸಿದ ಮುಖ್ಯಮಂತ್ರಿಗಳ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.ಈ ಕುರಿತಂತೆ ಬೆಂಗಳೂರಿನ ವಿಜಯನಗರದ ನಿವಾಸಿ ಎಂ.ಬಿ.ಆದಿನಾರಾಯಣ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಸಂಸದೀಯ ಕಾರ್ಯದರ್ಶಿಗಳ ನೇಮಕಾತಿಯು ಸಂವಿಧಾನದ ಪರಿಚ್ಛೇದ 164(1-ಎ)ಕ್ಕೆ ವಿರುದ್ಧವಾಗಿದೆ. ಸಂಸದೀಯ ಕಾರ್ಯದರ್ಶಿಗಳನ್ನು ಆ ಹುದ್ದೆಯಿಂದ ವಜಾಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ. ಅಲ್ಲದೆ,ಅರ್ಜಿ ಇತ್ಯರ್ಥವಾಗುವವರೆಗೆ ಸಂಸದೀಯ ಕಾರ್ಯ ದರ್ಶಿಗಳನ್ನು ನೇಮಿಸಿ ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಶಾಸಕರಾದ ಡಾ. ಅಂಜಲಿ ಹೇಮಂತ ನಿಂಬಾಳ್ಕರ್, ಕೌಜಲಗಿ ಮಹಂತೇಶ್ ಶಿವಾನಂದ, ರೂಪಕಲಾ ಎಂ.ಶಶಿಧರ್, ರಾಘವೇಂದ್ರ ಬಸವರಾಜ್ ಹಿಟ್ನಾಳ್, ಡಿ.ಎಸ್.ಹೂಲಗೇರಿ, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬರ್, ಐವಾನ್ ಡಿಸೋಜಾ ಮತ್ತು ಕೆ.ಗೋವಿಂದರಾಜ್ ಅವರನ್ನು ಸಂಸದೀಯ ಕಾರ್ಯದರ್ಶಿ ಗಳನ್ನಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇಮಿಸಿದ್ದರು.
ಈ ಸಂಬಂಧ ಸಂಸದೀಯ ವ್ಯವಹಾರಗಳ ಇಲಾಖೆ 2019ರ ಜ.7ರಂದು ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು.
ಇದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.