ಮುದಗಲ್ಲ: ಮುದಗಲ್ಲ ತಾಲೂಕು ರಚನೆಗೆ ಆಗ್ರಹಿಸಿ ಪಟ್ಟಣದ ಪ್ರಗತಿಪರ ಸಂಘಟನೆಗಳ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಚಾಮರಾಜ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಮುದಗಲ್ಲ ತಾಲೂಕು ರಚನೆ ಮಾಡದೇ ಅನ್ಯಾಯ ಮಾಡುತ್ತಿವೆ. ಮುಖ್ಯಮಂತ್ರಿಬಿ.ಎಸ್. ಯಡಿಯೂರಪ್ಪ ಮುದಗಲ್ಲ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿದರು.
ಮುದಗಲ್ಲ ಪಟ್ಟಣದ ಜನತೆ ಹಲವಾರು ವರ್ಷಗಳಿಂದಲೂ ತಾಲೂಕು ಕೇಂದ್ರ ರಚನೆಗೆ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಹಿಂದೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರವಿದ್ದಾಗ ಆಗಿನ ಕಂದಾಯ ಸಚಿವರಿಗೆ ಆಗಿನ ಶಾಸಕ ಮಾನಪ್ಪ ವಜ್ಜಲ್‌ರ ನೇತೃತ್ವದಲ್ಲಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿತ್ತು. ಆ ಸಮಯದಲ್ಲಿ ಮುಂದೆ ತಾಲೂಕು ರಚನೆ ಸಮಯದಲ್ಲಿ ಮುದಗಲ್ಲ ಪಟ್ಟಣವನ್ನು ಪರಿಗಣಿಸುವ ಭರವಸೆ ಸರಕಾರ ನೀಡಿತ್ತು. ಆದರೆ ಗ್ರಾಮ ಪಂಚಾಯತಿಯ ಕೇಂದ್ರ ಸ್ಥಾನಗಳನ್ನು ಆಯ್ಕೆ ಮಾಡಿಕೊಂಡು ರಾಜಕೀಯ ವಿಚಾರವಾಗಿ ತಾಲೂಕು ಕೇಂದ್ರಗಳನ್ನು ಘೋಷಣೆ ಮಾಡಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮುದಗಲ್ಲ ಪಟ್ಟಣ ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಪಡೆದಿದೆ. ಆದರೂ ಪಟ್ಟಣವನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ಅಧಿವೇಶನದಲ್ಲಿ ಮುದಗಲ್ಲನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಬೇಕು. ಇದಕ್ಕಾಗಿ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ ಎಂದರು.
ಕರವೇ ಅಧ್ಯಕ್ಷ ಎಸ್.ಎ. ನಯೀಮ್, ವಿವಿಧ ಘಟಕಗಳ ಪದಾ ಧಿಕಾರಿಗಳು, ಇಂಡಿಯನ್ ವಾಹನ ಚಾಲಕ ಮತ್ತು ಮಾಲಕರ ಸಂಘ, ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು, ಮುದಗಲ್ಲ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಬಿಜೆಪಿ ಮುದಗಲ್ಲ ಘಟಕದ ಅಧ್ಯಕ್ಷ ಸಿದ್ದಯ್ಯಸ್ವಾಮಿ, ಕಾಂಗ್ರೆಸ್ ಮುದಗಲ್ಲ ಬ್ಲಾಕ್ ಅಧ್ಯಕ್ಷ ದಾವೂದ್ ಸಾಬ್, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಅಮೀರಬೇಗ್ ಉಸ್ತಾದ, ಮುಖಂಡ ಗುರುಬಸಪ್ಪ ಸಜ್ಜನ, ಶರಣಪ್ಪ ಕಟ್ಟಿಮನಿ, ಶಿವರಾಜ ತಳವಾರ, ಖಾದ್ರಿ, ಮಹಾಂತೇಶ, ಶಬ್ಬೀರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.