ಆನೇಕಲ್: ಸೆಂಟರ್ ಆ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ವತಿಯಿಂದ ಅಖೀಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಮಾ.28, 29ರಂದು ಹಮ್ಮಿಕೊಂಡಿರುವ ಹಿನ್ನೆಲೆ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಮೆರವಣಿಗೆ ನಡೆಸಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ನೂರಾರು ಜನ ಸಂಘಟನೆಯ ಮುಖಂಡರು, ಕಾರ್ಯಕರ್ತರು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಮೆರವಣಿಗೆ ನಡೆಸಿ ಬಳಿಕ ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷರಿಗೆ ಮನವಿಪತ್ರವನ್ನು ನೀಡಿದರು.
ಈ ವೇಳೆ ಸಿಐಟಿಯು ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಖಾನೆ ಹಾಗೂ ಕಂಪನಿಗಳಿಗೆ ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದ್ದೇವೆ. ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷರ ಮೂಲಕ ಕಂಪನಿಗಳ ಮಾಲೀಕರಿಗೆ ಸಹಕಾರ ನೀಡುವಂತೆ ಮನವಿ ಪತ್ರ ನೀಡುವ ಸಲುವಾಗಿ ಕೈಗಾರಿಕಾ ಪ್ರದೇಶದಲ್ಲಿ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗಿದೆ ಎಂದರು.
ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್ ಮಾತನಾಡಿ, ಈಗಾಗಲೇ ಕೊರೊನಾ ಕಾರಣದಿಂದ ಕಾರ್ಖಾನೆಗಳು ಹಾಗೂ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಕಾರ್ಮಿಕರಿಗಾಗಿ ಸಂಘಟನೆಗಳು ಕರೆಯಲಾಗಿರುವ ಬಂದ್‌ಗೆ ಬೊಮ್ಮಸಂದ್ರ ಹಾಗೂ ವೀರಸಂದ್ರ ಅತ್ತಿಬೆಲೆ ಜಿಗಣಿ ಕೈಗಾರಿಕಾ ಸಂಘ ಸಂಪೂರ್ಣ ಸಹಕಾರವನ್ನು ನೀಡಲಿದೆ. ಆದರೆ, ಯಾವುದೇ ಕಾರ್ಮಿಕರು ರಜಾ ಹಾಕಿ ಕಂಪನಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ, ಕಾರ್ಮಿಕರಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ಕಂಪನಿ ಮುಚ್ಚದೆ ಕಾರ್ಮಿಕರು ಹಾಗೂ ಕಂಪನಿಗಳ ಮಾಲೀಕರು ಸಂಪೂರ್ಣವಾಗಿ ಸಹಕಾರವನ್ನು ನೀಡಲಿದ್ದಾರೆ. ಕಾರ್ಮಿಕರು ಅವರಾಗೆ ನಿಮ್ಮ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯಾವುದೇ ಕಂಪನಿ ಮಾಲೀಕರು ಹಾಗೂ ಕೈಗಾರಿಕಾ ಸಂಘದ ತಕರಾರು ಇಲ್ಲ ಎಂದರು.
ಬೊಮ್ಮಸಂದ್ರ ಕೈಗಾರಿಕಾ ಸಂಘದ ಖಜಾಂಚಿ ಸಂಜೀವ್ ಸಾವಂತ್, ಜಂಟಿ ಕಾರ್ಯದರ್ಶಿ ಮುರಳೀಧರ್, ವ್ಯವಸ್ಥಾಪಕ ಶಿವಕುಮಾರ್, ಸಿಐಟಿಯು ಬೆಂಗಳೂರು ನಗರ ಜಿಲಾ ಉಪಾಧ್ಯಕ್ಷ ಮಹದೇಶ್, ಎಐಟಿಯುಸಿ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ತೋಟಗೆರೆ, ತಾಲೂಕು ಮುಖಂಡ ಸುನೀಲ್, ಶಿವಕುಮಾರ್, ವಿಜಯ್ ಜಾದವ್ ಮತ್ತಿತರರು ಇದ್ದರು.