ಕಿಕ್ಕೇರಿ: ಹೋಬಳಿಯ ಗಡಿಯಂಚಿನ ಮಾದಾಪುರ ಗ್ರಾಮದ ಸನ್ಯಾಸಿ ಮಂಟಪ ತನ್ನದೇ ಆದ ಆಧ್ಯಾತ್ಮಿಕ, ಶ್ರಾದ್ಧ ಕೇಂದ್ರ, ಪಿಂಡ ಪ್ರಧಾನ ಕೇಂದ್ರವಾಗಿದೆ. ಗ್ರಾಮಾಭಿವೃದ್ಧಿಗಾಗಿ ನೂರಾರು ಎಕರೆ ಫಲವತ್ತಾದ ಭೂಮಿಯನ್ನು ಗ್ರಾಮದ ಹೆಣ್ಣು ಮಗಳಾದ ಮಹಾರಾಣಿ ದೇವಿರಮ್ಮಣ್ಣಿ ಗ್ರಾಮಕ್ಕೆ ದತ್ತು ನೀಡಿದ್ದು, ಇದರಲ್ಲಿ ಸನ್ಯಾಸಿ ಮಂಟಪ ಕೂಡ ಒಂದಾಗಿದೆ.
ಸುಮಾರು 300 ವರ್ಷಗಳ ಇತಿಹಾಸವಿರುವ ಮಂಟಪ ನಿರ್ವಹಣೆ ಕಾಣದೆ ಒತ್ತುವರಿ, ಗಿಡಗಂಟಿ, ಜೋಂಡು ಬೆಳೆದು ವಿಷಜಂತುಗಳ ಆವಾಸ ಸ್ಥಾನವಾಗಿದೆ. ಗ್ರಾಮದ ಹೊರವಲಯದ ಈ ಮಂಟಪದಲ್ಲಿ ಬಲು ಹಿಂದೆ ಓರ್ವ ಸನ್ಯಾಸಿ ನೆಲಸಿ ಜಪ, ತಪ ಮಾಡುತ್ತಿದ್ದನು ಎನ್ನುವುದು ಗ್ರಾಮದ ಹಿರಿಯರ ಅನಿಸಿಕೆಯಾಗಿದೆ. ಈ ಪ್ರದೇಶದಲ್ಲಿ ಹೇಮಾವತಿ ನದಿ ಪೂರ್ವಾಭಿಮುಖವಾಗಿ ಹರಿಯುವುದರಿಂದ ಅಪಾರ ಕರ್ಮಕ್ಕೆ ಪ್ರಾಶಸ್ತ್ಯವಾಗಿದೆ.
ಸನ್ಯಾಸಿ ನಿತ್ಯ ಗ್ರಾಮಕ್ಕೆ ತೆರಳಿ ಒಂದು ಮನೆಯಲ್ಲಿ ಮಾತ್ರ ಭಿಕ್ಷಾಟನೆ ಮಾಡಿ ನಂತರ ಜಪ, ತಪವನ್ನು ಮಂಟಪದಲ್ಲಿ ಮಾಡುತ್ತಿದ್ದರು. ಗ್ರಾಮದ ಓರ್ವ ಮಹಿಳೆ ಭಿಕ್ಷೆ ಬದಲು ಸಗಣಿಯನ್ನು ಭಿಕ್ಷೆ ನೀಡಿದ ಫಲವಾಗಿ ನೊಂದು ಈ ಸ್ಥಳದಲ್ಲಿರುವ ನದಿಯಲ್ಲಿ ಪ್ರಾಣ ತ್ಯಾಗ ಮಾಡಿದರು ಎನ್ನುವುದು ಸ್ಥಳೀಕರ ನುಡಿ. ಅಂದಿನಿಂದ ಈ ಸ್ಥಳದಲ್ಲಿ ಅಪಾರಕರ್ಮ, ಪಿಂಡ ಪ್ರಧಾನ ಕಾರ್ಯ ಸ್ಥಳದಲ್ಲಿ ನಡೆಯುತ್ತಿದ್ದು, ನಿರ್ವಹಣೆ ಕಾಣದೆ ಸನ್ಯಾಸಿ ಮಂಟಪ ಕುಸಿಯುವ ಹಂತ ತಲುಪಿದೆ. ತ್ವರಿತವಾಗಿ ಶ್ರಮದಾನದ ಮೂಲಕವಾದರೂ ಕನಿಷ್ಠ ಸನ್ಯಾಸಿ ಮಂಟಪ ಇರುವುದನ್ನು ಕಾಣುವಂತೆ ಮಾಡಲು ಮುಂದಾಗಬೇಕಿದೆ.
ನಮ್ಮ ಕ್ಷೇತ್ರದಲ್ಲಿ ಈ ಮಂಟಪ ಇರುವುದೇ ಹೆಮ್ಮೆಯಾಗಿದ್ದು, ಇತಿಹಾಸದ ಕುರುಹುನಂತಿರುವ ಈ ಸ್ಥಳದ ಅಭಿವೃದ್ಧಿಗೆ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗುವುದು. ಎಲ್ಲೆಡೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಶ್ರಮದಾನದ ಮೂಲಕ ಕೋಟೆ ಕೊತ್ತಲು ಶುಚಿ ಮಾಡಲು ಮುಂದಾಗುತ್ತಿದ್ದು, ನಮ್ಮೂರಿನ ಸ್ಮಾರಕದಂತಿರುವ ಈ ಮಂಟಪ ಶುಚಿಗೊಳಿಸುವರೇ ಎಂದು ಕಾದು ನೋಡಬೇಕಿದೆ ಎಂದು ಮಾದಾಪುರದ ಶೇಖರ್ ತಿಳಿಸಿದ್ದಾರೆ.
ಸ್ಥಳೀಯರ ಇಚ್ಛಾಶಕ್ತಿ ಕೊರತೆಯಿಂದ ಈಗಾಗಲೇ ದೇವಿರಮ್ಮಣ್ಣಿ ಹುಟ್ಟಿದ ಜಾಗದ ಕುರುಹು ಇಲ್ಲದಂತಾಗಿದೆ. ಇನ್ನಾದರೂ ಈ ಸನ್ಯಾಸಿ ಮಂಟಪವನ್ನು ಜಥನ ಮಾಡುವ ಕೆಲಸ ತ್ವರಿತವಾಗಿ ಮುಂದಾಗಬೇಕಿದೆ. 17 ಕಲ್ಲಿನಿಂದ ನಿರ್ಮಿತವಾಗಿರುವ ಮಂಟಪ ಹವಾನಿಯಂತ್ರಣ ಕೇಂದ್ರದಂತಿದ್ದು ಜಥನ ಮಾಡಿದರೆ ಸುಂದರ ಐತಿಹ್ಯ ಸ್ಥಳವಾಗಲಿದೆ.